24 ಗಂಟೆಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ 1,377 ಭಾರತೀಯರ ಸ್ಥಳಾಂತರ, ಕೀವ್‌ನಲ್ಲಿ ಭಾರತದ ಯಾರೂ ಉಳಿದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಯುದ್ಧಪೀಡಿತ ಉಕ್ರೇನ್‍ನಿಂದ ಭಾರತವು ತನ್ನ 1,377 ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು, ಬುಧವಾರ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪೋಲೆಂಡ್‍ನಿಂದ ಮೊದಲ ವಿಮಾನ ಸೇರಿದಂತೆ ಆರು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ. ಉಕ್ರೇನಿಂದ 1377 ಭಾರತೀಯ ಪ್ರಜೆಗಳನ್ನು ವಾಪಸ್ ಕರೆದೊಯ್ದಿದ್ದಾರೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಉಕ್ರೇನ್‍ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾದ ಆಪರೇಷನ್ ಗಂಗಾ ಅಡಿಯಲ್ಲಿ, ಭಾರತವು ಮುಂದಿನ ಮೂರು ದಿನಗಳಲ್ಲಿ 26 ಕ್ಕೂ ಹೆಚ್ಚು ವಿಮಾನಗಳನ್ನು ಕಾರ್ಯ ನಿರ್ವಹಿಸಲಿದೆ. ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕ್ ರಿಪಬ್ಲಿಕ್ ವಿಮಾನ ನಿಲ್ದಾಣಗಳನ್ನು ಬಳಸಿ ಭಾರತೀಯರನ್ನು ಅಲ್ಲಿಂದ ಕರೆತರಲಾಗುತ್ತಿದೆ.
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಯಾವುದೇ ಭಾರತೀಯ ಉಳಿದಿಲ್ಲ ಎಂದು ತಿಳಿಸಿದ್ದಾರೆ.ಉಕ್ರೇನ್‍ನಲ್ಲಿ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಇನ್ನೂ ಸಿಲುಕಿಕೊಂಡಿದ್ದು, ಅವರನ್ನು ಕರೆತರುವ ಪ್ರಯತ್ನ ಮುಂದುವರಿದಿದೆ. ಸುಮಾರು 9,000 ಭಾರತೀಯ ಪ್ರಜೆಗಳು ವಿವಿಧ ವಿಮಾನಗಳ ಮೂಲಕ ತೆರಳಿದ್ದಾರೆ ಎನ್ನಲಾಗಿದೆ.
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಭಾರತೀಯ ವಾಯುಪಡೆಯು ಸಹ ಸಹಾಯ ಮಾಡುತ್ತಿದೆ. ಸಿಕ್ಕಿಬಿದ್ದ ನಾಗರಿಕರನ್ನು ಸ್ಥಳಾಂತರಿಸಲು ಮೂರು C-17 ವಿಮಾನಗಳು ಹೊರಟಿವೆ ಎಂದು ಐಎಎಫ್‌ (IAF) ಉಪಾಧ್ಯಕ್ಷ ಏರ್ ಮಾರ್ಷಲ್ ಸಂದೀಪ್ ಸಿಂಗ್ ಹೇಳಿದ್ದಾರೆ. ಎಲ್ಲಾ ಭಾರತೀಯರನ್ನು ಮರಳಿ ಕರೆತರುವವರೆಗೂ ಸ್ಥಳಾಂತರ ಕಾರ್ಯಾಚರಣೆಯು ಹಗಲಿರುಳು ನಡೆಯುತ್ತದೆ ಎಂದು ಸಿಂಗ್ ಹೇಳಿದರು

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement