ಶೀಘ್ರವೇ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ : ಸಚಿವ ಶಿವರಾಮ ಹೆಬ್ಬಾರ

ಧಾರವಾಡ : ವಿವಿಧ ರೀತಿಯ ವಾಹನಗಳನ್ನು ದಿನನಿತ್ಯ ಓಡಿಸುವ ಚಾಲಕರು, ಕ್ಲೀನರ್‌ಗಳ ಬದುಕು ರಕ್ಷಿಸಲು ಮತ್ತು ಅವರ ಮಕ್ಕಳು, ಕುಟುಂಬ ಸದಸ್ಯರಿಗೆ ನೆರವಾಗಲು ಕಾರ್ಮಿಕ ಕಲ್ಯಾಣ ಮಂಡಳಿಯಂತೆ ರಾಜ್ಯದಲ್ಲಿ ಶೀಘ್ರವಾಗಿ ಚಾಲಕರ ಕಲ್ಯಾಣ ಮಂಡಳಿ (ಡ್ರೈವರ್ ಬೋರ್ಡ್) ಸ್ಥಾಪನೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾ ಹೇಳಿದ್ದಾರೆ.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಸಂಜೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಮೂಲಕ ಪ್ರಸಕ್ತ ಸಾಲಿನಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯೋಜಿಸುವ ತರಬೇತಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ಸುಮಾರು 70 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 750 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ನೀಡಲು ಬೆಂಗಳೂರಿನ ಐದು ಮತ್ತು ಧಾರವಾಡದ ಆರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ವೆಚ್ಚವನ್ನು ಆಯ್ಕೆಯಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೆರ ಜಮೆ ಮಾಡುತ್ತದೆ. ಪಾರದರ್ಶಕತೆ ಕಾಪಾಡುವುದು ಇದರ ಉದ್ದೇಶವಾಗಿದೆ. ಪ್ರತಿಭೆಗಳ ಪಲಾಯನವಾಗಬಾರದು, ಕಾರ್ಮಿಕ ಮಕ್ಕಳು ಉತ್ತಮ ಅಕಾರಿಗಳಾಗಿ ರೂಪಗೊಳ್ಳಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 400 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಡಿಬಿಟಿ ಮೂಲಕ ಶಿಷ್ಯವೇತನವನ್ನು 1,56,000 ದಷ್ಟು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೆರವಾಗಿ ಜಮೆ ಮಾಡಲಾಗುತ್ತಿದೆ. ಐಐಟಿ, ಐಐಐಟಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಎಲ್ಲ ರೀತಿಯ ತಾಂತ್ರಿಕ ಹಾಗೂ ಇತರ ಉನ್ನತ ಶಿಕ್ಷಣ ಕಲಿಯಲು ಕಾರ್ಮಿಕರ ಮಕ್ಕಳಿಗೆ ಉಚಿತ ಅವಕಾಶ ನೀಡಿ, ಇಲಾಖೆಯಿಂದ ವೆಚ್ಚ ಭರಿಸಲು ನಿರ್ಧರಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement