ರಾಜ್ಯದ ಸಚಿವರು, ಶಾಸಕರ ವೇತನ-ಭತ್ಯೆ ಹೆಚ್ಚಿಸುವ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಮುಖ್ಯಮಂತ್ರಿ, ಸಚಿವರು, ವಿಧಾನ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರ ಸಂಬಳ ಮತ್ತು ಭತ್ಯೆ ಹೆಚ್ಚಿಸುವ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಕಳೆದ ತಿಂಗಳು ನಡೆದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಸಚಿವರು, ಶಾಸಕರ ಸಂಬಳ ಮತ್ತು ಭತ್ಯೆ, ನಿವೃತ್ತಿ ವೇತನವನ್ನು ಶೇ. ೫೦ ರಷ್ಟು ಹೆಚ್ಚಳ ಮಾಡುವ ೨ ವಿಧೇಯಕಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು.

ಈ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಸಂಬಂಧ ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಇನ್ನು ಮುಂದೆ ಮುಖ್ಯಮಂತ್ರಿ, ಸಚಿವರುಗಳು, ವಿಧಾನಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ವಿರೋಧ ಪಕ್ಷದ ನಾಯಕರು, ಶಾಸಕರು ಮತ್ತು ಸಚೇತಕರುಗಳ ಸಂಬಳ ಮತ್ತು ಭತ್ಯೆಗಳು ಶೇ. ೫೦ರಷ್ಟು ಹೆಚ್ಚಾಗಲಿವೆ.
ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಸಚಿವ ಕೆ.ಎಸ್. ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಅಹೋರಾತ್ರಿ ಧರಣಿ ನಡೆಸಿತ್ತು. ಈ ಧರಣಿ ಗದ್ದಲದ ನಡುವೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-೨೦೨೨ ಮತ್ತು ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು ಮತ್ತು ನಿವೃತ್ತಿ ವೇತನಗಳು, ಭತ್ಯೆಗಳ ತಿದ್ದುಪಡಿಯ ವಿಧೇಯಕಗಳನ್ನು ಮಂಡಿಸಿದ್ದರು.ಇದಕ್ಕೆ ಉಭಯ ಸದನ ಧ್ವನಿ ಮತದ ಅಂಗೀಕಾರ ನೀಡಿತ್ತು.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

ಸದನ ಅನುಮೋದಿಸಿದ್ದ ಈ ವಿಧೇಯಕವನ್ನು ರಾಜ್ಯಪಾಲರ ಸಹಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಶುಕ್ರವಾರ ಈ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.
ಈ ವೇತನ, ಭತ್ಯೆ ಪರಿಷ್ಕರಣೆಗೆ ಇನ್ನು ಮುಂದೆ ಸದನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸುವ ಅಗತ್ಯ ಇಲ್ಲ. ಯಾಕೆಂದರೆ ಈ ವಿಧೇಯಕಗಳ ಜಾರಿಯಿಂದ ಇನ್ನು ಮುಂದೆ ಪ್ರತಿ ೫ ವರ್ಷಕ್ಕೊಮ್ಮೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರುಗಳು ಸೇರಿದಂತೆ ಈ ಎಲ್ಲರ ವೇತನ ಮತ್ತು ಭತ್ಯೆಗಳು ಪರಿಷ್ಕರಣೆಯಾಗುತ್ತವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement