ಅಂತಿಮ ಟೆಲಿಕಾಸ್ಟ್‌ನಲ್ಲಿ “ಯುದ್ಧ ಬೇಡ” ಎಂದು ಘೋಷಿಸಿದ ನಂತರ ರಷ್ಯಾದ ದೂರದರ್ಶನ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ ಟಿವಿಯಲ್ಲಿ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ…!
ಉಕ್ರೇನ್ ಯುದ್ಧದ ಕವರೇಜ್‌ನ ಮೇಲೆ ರಷ್ಯಾದ ಅಧಿಕಾರಿಗಳು ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಟಿವಿ ರೇನ್ (ಡೊಜ್ಡ್) ಸಿಬ್ಬಂದಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಚಾನೆಲ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ ಸಿಂಡೆಯೆವಾ, ಉದ್ಯೋಗಿಗಳು ಸ್ಟುಡಿಯೊದಿಂದ ಹೊರನಡೆಯುತ್ತಿರುವಾಗ ಅದರ ಕೊನೆಯ ಪ್ರಸಾರದಲ್ಲಿ “ಯುದ್ಧ ಬೇಡ” ಎಂದು ಹೇಳಿದ್ದಾರೆ ಹಾಗೂ “ಅನಿರ್ದಿಷ್ಟಾವಧಿಗೆ” ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಾನಲ್ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಸಾಮೂಹಿಕ ರಾಜೀನಾಮೆಯ ವೀಡಿಯೊವನ್ನು ಬರಹಗಾರ ಡೇನಿಯಲ್ ಅಬ್ರಹಾಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಿಬ್ಬಂದಿಯ ನಾಟಕೀಯ ನಿರ್ಗಮನದ ನಂತರ, ವಾಹಿನಿಯು 1991 ರಲ್ಲಿ ಸೋವಿಯತ್ ಯೂನಿಯನ್ ಪತನಗೊಂಡಾಗ ರಷ್ಯಾದ ಸರ್ಕಾರಿ ಟಿವಿ ಚಾನೆಲ್‌ಗಳಲ್ಲಿ ತೋರಿಸಲಾದ ‘ಸ್ವಾನ್ ಲೇಕ್’ ಬ್ಯಾಲೆಟ್ ವೀಡಿಯೊವನ್ನು ಪ್ಲೇ ಮಾಡಿತು. ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಷ್ಯಾದ ಕೊನೆಯ ಉದಾರವಾದಿ ಮಾಧ್ಯಮಗಳಲ್ಲಿ ಒಂದಾದ ಎಖೋ ಮಾಸ್ಕ್ವಿ (ಮಾಸ್ಕೋದ ಎಕೋ) ರೇಡಿಯೊ ಸ್ಟೇಷನ್ ಅನ್ನು ಉಕ್ರೇನ್‌ನಲ್ಲಿನ ಯುದ್ಧದ ಪ್ರಸಾರದ ಮೇಲೆ ಒತ್ತಡ ಹೇರಿದ ನಂತರ ಅದರ ಮಂಡಳಿಯು ವಿಸರ್ಜಿಸಿದೆ ಎಂದು ಅದರ ಸಂಪಾದಕರು ಗುರುವಾರ ಹೇಳಿದ್ದಾರೆ.
ಮಂಡಳಿಯ ನಿರ್ಧಾರವನ್ನು ಪ್ರಕಟಿಸಿದ ನಂತರವೂ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿರುವಂತೆ ತೋರುತ್ತಿದ್ದರೂ, ರಷ್ಯಾದಲ್ಲಿ ಪ್ರಮುಖ ಸುದ್ದಿ ಮತ್ತು ಪ್ರಸ್ತುತ ವ್ಯವಹಾರಗಳ ಚಾನೆಲ್‌ಗಳಲ್ಲಿ ಒಂದಾದ ಸ್ಟೇಷನ್ ಮಂಗಳವಾರ ಪ್ರಸಾರ ಮಾಡುವುದನ್ನು ನಿಲ್ಲಿಸಿದೆ.
ರೇಡಿಯೋ ಸ್ಟೇಷನ್ ರಷ್ಯಾದ ಆಕ್ರಮಣದ ಭಯಾನಕತೆಯನ್ನು ವಿವರಿಸಿದ ಉಕ್ರೇನಿಯನ್ ಪತ್ರಕರ್ತರೊಂದಿಗೆ ಸಂದರ್ಶನಗಳನ್ನು ಒಳಗೊಂಡಿತ್ತು.
ಆದಾಗ್ಯೂ, ಮುಖ್ಯ ಸಂಪಾದಕ ಅಲೆಕ್ಸಿ ವೆನೆಡಿಕ್ಟೋವ್ ಅವರು, ರೇಡಿಯೊ ಸ್ಟೇಶನ್ ಮೂರು ದಶಕಗಳಿಂದ ಪಾಲಿಸಿಕೊಂಡು ಬಂದ ಅದರ ವಿಶಿಷ್ಟ ಲಕ್ಷಣವಾಗಿರುವ ಸ್ವತಂತ್ರ ಸಂಪಾದಕೀಯ ಮಾರ್ಗವನ್ನು ತ್ಯಜಿಸುವುದಿಲ್ಲ, “ನಮ್ಮ ಸಂಪಾದಕೀಯ ನೀತಿಗಳು ಬದಲಾಗುವುದಿಲ್ಲ” ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಸ್ವತಂತ್ರ ಸುದ್ದಿವಾಹಿನಿಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಉಕ್ರೇನ್ ಆಕ್ರಮಣದ ಸುದ್ದಿಯನ್ನು ರಷ್ಯನ್ನರು ಕೇಳದಂತೆ ತಡೆಯುವ ಮೂಲಕ ರಷ್ಯಾವು “ಮಾಧ್ಯಮ ಸ್ವಾತಂತ್ರ್ಯ ಮತ್ತು ಸತ್ಯದ ಮೇಲೆ ಸಂಪೂರ್ಣ ಯುದ್ಧ” ಪ್ರಾರಂಭಿಸಿದೆ ಎಂದು ಅಮೆರಿಕ ಬುಧವಾರ ಆರೋಪಿಸಿದೆ.
ಹತ್ತಾರು ಮಿಲಿಯನ್ ರಷ್ಯಾದ ನಾಗರಿಕರು ಸ್ವತಂತ್ರ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಪ್ರವೇಶಿಸಲು ಅವಲಂಬಿಸಿರುವ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ರಷ್ಯಾ ಸರ್ಕಾರ ತಡೆಯುತ್ತಿದೆ” ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ