ಪಾಕಿಸ್ತಾನದಲ್ಲಿ ಹತ್ಯೆಯಾದ 1999 ರಲ್ಲಿ ಏರ್ ಇಂಡಿಯಾ ವಿಮಾನ ಹೈಜಾಕ್ ಮಾಡಿದ್ದ ಭಯೋತ್ಪಾದಕ

ಇಸ್ಲಾಮಾಬಾದ್: 1999 ರಲ್ಲಿ ಏರ್ ಇಂಡಿಯಾ ವಿಮಾನ IC-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದ ಕರಾಚಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಮಾರ್ಚ್ 1 ರಂದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಆತ ತನ್ನ ಮನೆಯಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ.

ಈತ ಝಹೂರ್ ಜೈಶ್ ಎ ಮುಹಮ್ಮದ್ ಉಗ್ರಗಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ. ಇಬ್ಬರು ದಾಳಿಕೋರರು ಬೈಕ್ ನಲ್ಲಿ ಆಗಮಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮಾಸ್ಕ್ ಧರಿಸಿದ್ದರಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಬೈಕ್ ನಲ್ಲಿ ಇಡೀ ಪ್ರದೇಶದಲ್ಲಿ ಸುತ್ತಾಡಿದ್ದು, ಬಳಿಕ ಝಹೂರ್ ಮೇಲೆ ದಾಳಿ ನಡೆಸಿದ್ದರು ಎಂದು ಹೇಳಲಾಗಿದೆ.
ಭಾರತದ ಜೈಲಿನಲ್ಲಿ ಕೈದಿಗಳಾಗಿದ್ದ ಜೈಶ್ ಎ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್, ಭಯೋತ್ಪಾದಕ ಸಂಘಟನೆಯ ಅಲ್ ಉಮರ್ ಮುಜಾಹಿದೀನ್, ಮುಷ್ತಾಕ್ ಅಹ್ಮದ್ ಝರ್ಗಾರ್ ಮತ್ತು ಬ್ರಿಟನ್ ಮೂಲದ ಅಲ್ ಖೈದಾ ಮುಖಂಡ ಅಹ್ಮದ್ ಒಮರ್ ಸಹೀದ್ ಶೇಕ್ ನನ್ನು ಬಿಡುಗಡೆಗೊಳಿಸಲು 1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಉಗ್ರರು ಕಂದಹಾರಕ್ಕೆ ಹೈಜಾಕ್ ಮಾಡಿದ್ದರು.

ಓದಿರಿ :-   ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರಿಂದ ಗುಂಡೇಟು

ಏರ್ ಇಂಡಿಯಾ ವಿಮಾನದಲ್ಲಿ 176 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸುಮಾರು ಏಳು ದಿನಗಳ ಕಾಲ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಉಗ್ರರು ಹೈಜಾಕ್ ಮಾಡಿ ಅಫ್ಘಾನಿಸ್ತಾನದ ಕಂದಾಹಾರ್ ಗೆ ತೆಗೆದುಕೊಂಡು ಹೋಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಅಂದಿನ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಭಯೋತ್ಪಾದಕ ಮಸೂದ್ ಸೇರಿದಂತೆ ಐವರು ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿದ ನಂತರ 176 ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿತ್ತು. ಈ ಅಪಹರಣ ಕಾರ್ಯಾಚರಣೆಯನ್ನು ಪಾಕಿಸ್ತಾನದ ಮಿಲಿಟರಿ ಗುಪ್ತಚರ, ಐಎಸ್‌ಐ ಬೆಂಬಲಿಸಿದೆ ಎಂದು ಹೇಳಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ