ನವದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ (NEET-UG )ಯಲ್ಲಿ ಕಾಣಿಸಿಕೊಳ್ಳಲು ಈವರೆಗೆ ಇದ್ದ ಗರಿಷ್ಠ ವಯಸ್ಸಿನ ಮಿತಿಯನ್ನು ಅನ್ನು ಎಲ್ಲಾ ಅಭ್ಯರ್ಥಿಗಳಿಗೆ ತೆಗೆದುಹಾಕಲಾಗಿದೆ ಎಂದು ದೇಶದ ವೈದ್ಯಕೀಯ ಶಿಕ್ಷಣದ ಉನ್ನತ ನಿಯಂತ್ರಣ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (the National Medical Commission) ತಿಳಿಸಿದೆ.
ಈ ಮೊದಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲು ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ಇತ್ತು.ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕನೇ ಎನ್‌ಎಂಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಾ.ಪುಲ್ಕೇಶ್ ಕುಮಾರ್ ತಿಳಿಸಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್‌ಟಿಎ) ಬರೆದ ಪತ್ರದಲ್ಲಿ ಡಾ ಕುಮಾರ್ ಅವರು NEET UG ಯ ಮಾಹಿತಿ ಬುಲೆಟಿನ್‌ನಿಂದ ಗರಿಷ್ಠ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವಂತೆ ಏಜೆನ್ಸಿಗೆ ಸೂಚಿಸಿದ್ದಾರೆ.
4ನೇ ಎನ್‌ಎಂಸಿ ಸಭೆಯಲ್ಲಿ ನಿರ್ಧರಿಸಲಾಗಿದೆ… ನೀಟ್ ಯುಜಿ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಯಾವುದೇ ನಿಗದಿತ ಗರಿಷ್ಠ ವಯಸ್ಸಿನ ಮಿತಿ ಇರಬಾರದು. ಆದ್ದರಿಂದ, ಮಾಹಿತಿ ಬುಲೆಟಿನ್ ಅನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸಬಹುದು ಎಂದು ಡಾ ಕುಮಾರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು, “ರಾಷ್ಟ್ರೀಯ ವೈದ್ಯಕೀಯ ಆಯೋಗವು NEET-UG ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಈ ನಿರ್ಧಾರವು ಮಹತ್ವಾಕಾಂಕ್ಷಿ ವೈದ್ಯರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಎಂಬಿಬಿಎಸ್ (MBBS), ಬಿಡಿಎಸ್ (BDS) ಮತ್ತು ಇತರ ಕೆಲವು ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET ಭಾರತದಲ್ಲಿನ ಏಕೈಕ ಪ್ರವೇಶ ಪರೀಕ್ಷೆಯಾಗಿದೆ. ಪ್ರತಿ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಇದಕ್ಕೆ ಹಾಜರಾಗುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ನೀಟ್ (NEET) 2022 ಕ್ಕೆ ದಿನಾಂಕ ಮತ್ತು ಸಮಯವನ್ನು ಎನ್‌ಟಿಎ (NTA) ಇನ್ನೂ ಪ್ರಕಟಿಸಿಲ್ಲ.
2021 ರಿಂದ, ಬಿಎಸ್‌ಸಿ ನರ್ಸಿಂಗ್ ಮತ್ತು ಬಿಎಸ್‌ಸಿ ಆರೋಗ್ಯ ವಿಜ್ಞಾನ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಯನ್ನು ಬಳಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ