ಆರು ವರ್ಷಗಳ ಹಿಂದೆ ಕಳೆದುಹೋಗಿದ್ದ ಮಾತು ಬಾರದ ಪುತ್ರನನ್ನು ಹುಡುಕಿಕೊಟ್ಟ ಆಧಾರ್‌ ಕಾರ್ಡ್‌..!

ಬೆಂಗಳೂರು: ಆಧಾರ್‌ ಕಾರ್ಡ್‌ನಿಂದಾಗಿ ಆರು ವರ್ಷಗಳ ಹಿಂದೆ ಕಳೆದುಹೋಗಿದ್ದ ಮಾತುಬಾರದ ಮಗ ತನ್ನ ತಾಯಿಯ ಮಡಿಲು ಸೇರಿದ್ದಾನೆ.
ಆಧಾರ್‌ ಕಾರ್ಡ್‌ ನೀಡಿದ ಮಾಹಿತಿ ಆಧಾರದಲ್ಲಿ ಕಳೆದ 6 ವರ್ಷಗಳ ಹಿಂದೆ ಯಲಹಂಕದಲ್ಲಿ ನಾಪತ್ತೆಯಾಗಿದ್ದ ಮಾತು ಬಾರದ ಮಗ ತಾಯಿ ಮಡಿಲನ್ನು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭರತ (19) ಮಾತು ಬಾರದ ಯುವಕನಾಗಿದ್ದು, 2016ರಲ್ಲಿ ನಾಪತ್ತೆಯಾಗಿದ್ದ. 2016ರಲ್ಲಿ ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಗೆ ಭರತ ತಾಯಿ ಪಾರ್ವತಮ್ಮ ಮಗನನ್ನು ಕರೆದುಕೊಂಡು ಹೋಗಿದ್ದರು. ಆಗ ಮಾತುಬಾರದ ಭರತ ನಾಪತ್ತೆಯಾಗಿದ್ದ. ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದರಿಂದ ಮತ್ತೆ ಎಷ್ಟೇ ಹುಡುಕಾಡಿದರೂ ಮಗ ಸಿಕ್ಕಿರಲಿಲ್ಲ. ಕೊನೆಗೆ ಪಾರ್ವತಮ್ಮ ಯಲಹಂಕ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಪೊಲೀಸರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ತಾಯಿಯಿಂದ ಬೇರ್ಪಟ್ಟಿದ್ದ ಭರತ ಯಲಹಂಕ ರೈಲ್ವೆ ನಿಲ್ದಾಣದ ವರೆಗೆ ನಡೆದುಕೊಂಡು ಬಂದು ಅಲ್ಲಿ ನಿಂತಿದ್ದ ರೈಲು ಹತ್ತಿದ್ದ. ಅದು ಮಹಾರಾಷ್ಟ್ರದ ನಾಗಪುರ ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದಿದ್ದ. ಭರತನನ್ನು ಕಂಡ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಆತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಭರತನಿಗೆ ಮಾತು ಬಾರದೇಯಿದ್ದ ಹಿನ್ನೆಲೆಯಲ್ಲಿ ಊರು ಹಾಗೂ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಆಗಿರಲಿಲ್ಲ.
ಆದರೆ ಇತ್ತೀಚಿಗೆ ಭರತ್‌ಗೆ ಆಧಾರ್‌ ಕಾರ್ಡ್‌ ಮಾಡಿಸಲು ಪುನರ್ವಸತಿ ಕೇಂದ್ರದ ಅಧಿಕಾರಿಯೊಬ್ಬರು ಕಳೆದ ಜನವರಿಯಲ್ಲಿ ನಾಗಪುರದ ಸ್ಥಳೀಯ ಆಧಾರ್‌ ಸೇವಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಆಗ ಈತ ಬೆಂಗಳೂರಿನಲ್ಲಿ ಭರತಕುಮಾರ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಚಾಲ್ತಿಯಲ್ಲಿರುವ ಬಗ್ಗೆ ಸುಳಿವು ನೀಡಿತ್ತು. ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇರುವುದು ಕಂಡು ಬಂದಿದೆ.
ಆಧಾರ್‌ ಕಾರ್ಡ್‌ ದಾಖಲೆ ಮೂಲಕ ಭರತ್‌ನ ತಾಯಿ ಪಾರ್ವತಮ್ಮ ಮೊಬೈಲ್ ನಂಬರ್‌ ಪಡೆದ ನಾಗಪುರ ಪುನರ್ವಸತಿ ಕೇಂದ್ರದ ಸಿಬ್ಬಂದಿ, ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಯಲಹಂಕ ಪೊಲೀಸರನ್ನು ಸಂಪರ್ಕಸಿ ಮಾಹಿತಿ ನೀಡಲಾಯಿತು. ಯಲಹಂಕ ಠಾಣೆ ಪೊಲೀಸರು ಪಾರ್ವತಮ್ಮ ಅವರನ್ನು ಪತ್ತೆ ಹಚ್ಚಿ, ಠಾಣಾ ಸಿಬ್ಬಂದಿ ಜೊತೆಗೆ ಅವರನ್ನು ನಾಗಪುರಕ್ಕೆ ಕರೆದುಕೊಂಡು ಹೋದರು. ಮಾ.7ರಂದು ಮಗನನ್ನು ಕಂಡ ಪಾರ್ವತಮ್ಮ ಭಾವುಕರಾದ ಸದ್ಯ ಮನೆಗೆ ಕರೆ ತಂದಿದ್ದಾರೆ.
ಆಧಾರ್ ಕಾರ್ಡ್ ಮೂಲಕ ಕಳೆದು ಹೋಗಿದ್ದ ಮಾತು ಬಾರದ ಮಗನನ್ನು ಮತ್ತೆ ಸೇರಲು ಸಹಾಯ ಮಾಡಿದೆ. ಆರು ವರ್ಷಗಳ ಹಿಂದೆ ನಾಗ್ಪುರ ರೈಲು ನಿಲ್ದಾಣದಲ್ಲಿ ಪತ್ತೆಯಾದ 19 ವರ್ಷದ ವಿಶೇಷ ಸಾಮರ್ಥ್ಯದ ಭರತ, ತನ್ನ ತಾಯಿಯೊಂದಿಗೆ ಮತ್ತೆ ಒಂದಾಗಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement