ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ವಿರೋಧವಿಲ್ಲ: ಸಿದ್ದರಾಮಯ್ಯ

posted in: ರಾಜ್ಯ | 0

ಮಂಗಳೂರು: ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ಕ್ರಮಕ್ಕೆ ನಮ್ಮ ಪಕ್ಷದ ವಿರೋಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದೊಗೆ ಮಾತನಾಡಿದ ಅವರು, ನಾನು ಭಗವದ್ಗೀತೆಯ ವಿರೋಧಿಯಲ್ಲ. ಶಾಲೆಗಳಲ್ಲಿ ಭಗವದ್ಗೀತೆ, ಖುರಾನ್ ಮತ್ತು ಬೈಬಲ್ ಕಲಿಸುವ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಮಕ್ಕಳಿಗೆ ನೈತಿಕ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು. ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವ ಶಿಕ್ಷಣ ನೀಡಬಾರದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಎಲ್ಲ ಧರ್ಮಗಳ ಮೇಲೆ ಗೌರವ ಹೊಂದಿದೆ. ನಾವು ಹಿಂದೂ ಧರ್ಮವನ್ನು ನಂಬುತ್ತೇವೆ. ಆದರೆ ಯಾವುದೇ ಮೃದು ಅಥವಾ ಕಠಿಣ ಹಿಂದುತ್ವ ಎಂಬುದಿಲ್ಲ. ಸಂವಿಧಾನ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡಿದೆ. ಸಂವಿಧಾನದ ಪ್ರಕಾರವೇ ನಾವು ನಡೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾರೂ ಕೋಮುವಾದ ಮಾಡಬಾರದು
ಹಿಜಾಬ್ ಕುರಿತಾಗಿನ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ, ಕೋರ್ಟ್ ತೀರ್ಪು ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂ ಕೋರ್ಟ್ ನಿರ್ಧಾರವನ್ನೂ ವಿರೋಧ ಮಾಡಬಾರದು. ಹಿಂದೂ, ಮುಸ್ಲಿಂ ಯಾವ ಧರ್ಮದವರೂ ಕೋಮುವಾದ ಮಾಡಬಾರದು ಎಂದರು.

ಓದಿರಿ :-   ಹುಚ್ಚು ಸಾಹಸ...ಶ್ರೀನಿವಾಸ ಸಾಗರ ಅಣೆಕಟ್ಟಿನ ಗೋಡೆ ಹತ್ತುವಾಗ 30 ಅಡಿ ಎತ್ತರದಿಂದ ಬಿದ್ದ ಯುವಕ | ದೃಶ್ಯ ವೀಡಿಯೊದಲ್ಲಿ ಸೆರೆ

ಗೋಧ್ರಾ ಹತ್ಯಾಕಾಂಡದ ಬಗ್ಗೆಯೂ ಸಿನೆಮಾ ಮಾಡಲಿ
ಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡದ ಸತ್ಯಾಸತ್ಯತೆಯ ಬಗ್ಗೆಯೂ ಸಿನೆಮಾ ಮಾಡಲಿ ಎಂದು ಸಿದ್ಧರಾಮಯ್ಯ ಹೇಳಿದರು.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವುದರ ಬಗ್ಗೆ ಯಾರೂ ಬೇಡ ಎಂದಿಲ್ಲ. ಆದರೆ ನಡೆದ ಸತ್ಯವನ್ನು ಮಾತ್ರ ಜನರಿಗೆ ತೋರಿಸಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರು ಏನ್ ಮಾಡಿದರು? ಕಾಶ್ಮೀರಿ ಪಂಡಿತರು ಸೇರಿದಂತೆ ಬೇರೆ ಸಮುದಾಯದವರೊಂದಿಗೆ ಏನೆಲ್ಲ ಆಗಿದೆ ಎಂಬುದನ್ನು ತೋರಿಸಬೇಕು. ಅದರ ಜೊತೆಗೆ ಗುಜರಾತ್‌ನಲ್ಲಿ ನಡೆದದ್ದು, ಲಖಿಂಪುರದಲ್ಲಿ ನಡೆದದ್ದನ್ನೂ ತೋರಿಸಬೇಕು. ಗೋಧ್ರಾ ಹತ್ಯಾಕಾಂಡದ ಬಗ್ಗೆಯೂ ಸಿನೆಮಾ ಮಾಡಿ ಜನರಿಗೆ ತೋರಿಸಬೇಕು ಎಂದು ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ