ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ಅತ್ಯಂತ ಸಂತೋಷದ ಸಂಗತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಶಿರಸಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ಅತ್ಯಂತ ಸಂತೋಷದ ಸಂಗತಿ. ಪ್ರಸ್ತಾಪವಿದ್ದರೆ ಅದ‌ನ್ನು ಸ್ವಾಗತಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಸಮಯದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಪಠ್ಯದಲ್ಲಿ ಅಳವಡಿಸುವುದನ್ನು ಯಾವ ರೀತಿ ಮಾಡಬೇಕು ಎಂದು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸುಮಾರು ೫೫ ವರ್ಷಗಳ ಹಿಂದೆ ಅಂದರೆ, ನಾವೆಲ್ಲ ಶಾಲೆಗೆ ಹೋಗುವಾಗ ಪಠ್ಯ ಪುಸ್ತಕದಲ್ಲಿ ಅವನು ಈಶ, ಇವನು ಗಣಪ, ಗಣಪ ಈಶನ ಮಗ ಎನ್ನುವ ವಾಕ್ಯ ಇರುತ್ತಿತ್ತು.. ಅಂಥ ಶಬ್ದಗಳನ್ನು ಓದಿಯೇ ಬೆಳೆದಿದ್ದೇವೆ. ಇದೇನು ಹೊಸದಾಗಿ ಬರುತ್ತಿಲ್ಲ. ಆದರೆ ಜಾತ್ಯತೀತ ವಾದಿಗಳಿಗೆ ಅದು ಪಥ್ಯವಾಗದ್ದರಿಂದ ಅದನ್ನು ಬದಲಾಯಿಸಲಾಯಿತು ಎಂದರು.

ಭಗವದ್ಗೀತೆಯನ್ನು ಪಠ್ಯದಲ್ಲಿ ಎಷ್ಟು ಸೇರಿಸಬೇಕು, ಯಾವುದನ್ನು ಸೇರಿಸಬೇಕು ಎನ್ನುವುದು ಮುಂದೆ ನಿರ್ಧಾರ ಮಾಡುತ್ತಾರೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದನ್ನು ಪ್ರಚಂಡ ಜಾತ್ಯತೀತ ವಾದಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ ಎಂದರು.
ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿಗೆ ೪೨೦ ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಗೆ ವೇಗ ನೀಡಲು ಅಧಿವೇಶನ ನಡೆದ ನಂತರ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಕಾಳಿ ನದಿ ನೀರನ್ನು ಕುಡಿಯುವ ನೀರಿನ ಹೆಸರಿನಲ್ಲಿ ಉತ್ತರ ಕರ್ನಾಟಕ್ಕೆ ಒಯ್ಯುವ ಪ್ರಸ್ತಾವ ಬಜೆಟ್ ನಲ್ಲಿ ಘೋಷಣೆಯಾಗಿದೆ. ಆದರೆ ಜಿಲ್ಲೆಯ ಜನರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಂಡು ಹೆಜ್ಜೆ ಇಡಲಾಗುವುದು. ಜಿಲ್ಲೆಯ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕದ ಶಕ್ತಿ ಪೀಠದ ದೇವತೆ ಶ್ರೀ ಮಾರಿಕಾಂಬೆಯ ದರ್ಶನ ಪಡೆದಿದ್ದೇನೆ, ಇಡೀ ದೇಶ ಮಟ್ಟದಲ್ಲಿ ದೇವಿಗೆ ಪ್ರಖ್ಯಾತಿ ಇದೆ. ಶ್ರೀ ದೇವಿ ಸರ್ವರಿಗೆ ಸನ್ಮಂಗಲವನ್ನು ಉಂಟುಮಾಡಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ತಿಳಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಮತ್ತಿತರರು ಇದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement