ಅಕ್ರಮ ಆಸ್ತಿ ಸಂಪಾದನೆ ಪ್ರಕರಣ; ಸಚಿವ ಸೋಮಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಸಮನ್ಸ್

posted in: ರಾಜ್ಯ | 0

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದ್ದು, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾ. ಬಿ ಜಯಂತಕುಮಾರ್‌ ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶ ಮಾಡಿದ್ದಾರೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಎಸಿಬಿಯ ತನಿಖಾಧಿಕಾರಿಯು ಕಾನೂನಿನ ಪ್ರಕಾರ ತನಿಖೆ ನಡೆಸಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸಿಆರ್‌ಪಿಸಿ ಸೆಕ್ಷನ್‌ 173ರ ಪ್ರಕಾರ ತನಿಖಾಧಿಕಾರಿಯು ಅಂತಿಮ ವರದಿ ಸಲ್ಲಿಸಬೇಕು. ಸಿಆರ್‌ಪಿಸಿ ಸೆಕ್ಷನ್‌ 202(1)ರ ಅಡಿ ವರದಿ ಒಪ್ಪಲು ಸೂಕ್ತ ಆಧಾರಗಳನ್ನು ನೀಡುವಲ್ಲಿ ತನಿಖಾಧಿಕಾರಿ ವಿಫಲರಾಗಿದ್ದಾರೆ. ಹೀಗಾಗಿ, ತನಿಖಾಧಿಕಾರಿ ಸಲ್ಲಿಸಿರುವ ವರದಿಯನ್ನು ಒಪ್ಪಲಾಗದು. ಆದ್ದರಿಂದ ಅದನ್ನು ವಜಾ ಮಾಡಲಾಗಿದೆ ಎಂದು ಪೀಠವು ಹೇಳಿದೆ ಎಂದು ವರದಿ ತಿಳಿಸಿದೆ.
ಅಕ್ರಮ ಆಸ್ತಿ ಗಳಿಕೆ ಲೆಕ್ಕಹಾಕುವ ವಿಚಾರದಲ್ಲಿ ತನಿಖಾಧಿಕಾರಿ ವಿಫಲವಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸದೇ ಕಾನೂನಿಗೆ ವಿರುದ್ಧವಾಗಿ ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ ಎಂಬ ದೂರುದಾರರ ವಾದದಲ್ಲಿ ತಿರುಳಿದೆ. ಬೆಂಗಳೂರಿನ ಹೊಸಹಳ್ಳಿ ನಗರಸಭೆ ಸದಸ್ಯ, ಶಾಸಕ, ಸಚಿವರಾದ ಬಳಿಕ ಆರೋಪಿ ಸೋಮಣ್ಣ ಅವರು ಹೇಗೆ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ವಿವರಿಸಬೇಕಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಓದಿರಿ :-   ತನ್ನ ಐಷಾರಾಮಿ ಕಾರನ್ನು ತಾನೇ ಕಾವೇರಿ ನದಿಯಲ್ಲಿ ಮುಳುಗಿಸಿದ ವ್ಯಕ್ತಿ...!

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ