ನವದೆಹಲಿ: ಪ್ರಸ್ತುತ ರದ್ದುಗೊಂಡಿರುವ ಕೇಂದ್ರದ ಕೃಷಿ ಕಾಯಿದೆಗಳ ಕುರಿತು ಈ ಹಿಂದೆ ಪ್ರತಿಕ್ರಿಯೆ ಪಡೆಯಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ಸಲ್ಲಿಸಿದ್ದ ಮಾರ್ಚ್ 2021ರ ವರದಿಯಲ್ಲಿ ಕಾಯಿದೆ ಜಾರಿಗೆ ತರುವ ಸಂಬಂಧ ಅನೇಕ ಶಿಫಾರಸುಗಳನ್ನು ಮಾಡಿರುವುದಾಗಿ ತಿಳಿದು ಬಂದಿದೆ.
ವರದಿಯ ಮುಖ್ಯ ಅಂಶವೆಂದರೆ ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ಬಹುತೇಕ ರೈತರು ಹಾಗೂ ಭಾಗೀದಾರರು ಬೆಂಬಲಿಸಿದ್ದರು ಎನ್ನುವುದಾಗಿದೆ. ಕೃಷಿ ಅರ್ಥಶಾಸ್ತ್ರಜ್ಞರಾದ ಪ್ರಮೋದ್ ಜೋಶಿ ಮತ್ತು ಅಶೋಕ್ ಗುಲಾಟಿ ಹಾಗೂ ಶೇತಕಾರಿ ಸಂಘಟನೆಯ ನಾಯಕ ಅನಿಲ್ ಘನಾವತ್ ಅವರ ನೇತೃತ್ವದ ಸಮಿತಿ ಇತ್ತೀಚೆಗೆ ಪ್ರಕಟಿಸಿದ ವರದಿ ತಿಳಿಸಿದೆ. ವರದಿಯ ಪ್ರಕಾರ ಕೇವಲ ಶೇ 13.3 ರಷ್ಟು ಕೃಷಿಕರು ಮಾತ್ರ ಕಾಯಿದೆಗಳನ್ನು ವಿರೋಧಿಸಿದ್ದರು. 3.3 ಕೋಟಿಗೂ ಹೆಚ್ಚು ರೈತರನ್ನು ಪ್ರತಿನಿಧಿಸುವ ಸುಮಾರು ಶೇ 85.7 ಪ್ರತಿಶತ ರೈತ ಸಂಘಟನೆಗಳು ಕೃಷಿ ಕಾನೂನುಗಳನ್ನು ಬೆಂಬಲಿಸಿವೆ ಎಂದು ಬಾರ್ ಅಂಡ್ ಬೆಂಚ್ ವರದಿ ತಿಳಿಸಿದೆ.
ಸಮಿತಿಯು ತನ್ನ ಆನ್‌ಲೈನ್ ಪೋರ್ಟಲ್ ಮೂಲಕ ಸ್ವೀಕರಿಸಿದ ಪ್ರತಿಕ್ರಿಯೆಯಂತೆ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಕಾನೂನನ್ನು ಬೆಂಬಲಿಸಿರಲಿಲ್ಲ. ಸುಮಾರು ಮೂರನೇ ಎರಡರಷ್ಟು ಮಂದಿ ಕಾಯಿದೆಗಳ ಪರವಾಗಿದ್ದರು. ಇಮೇಲ್ ಮೂಲಕ ಸ್ವೀಕರಿಸಿದ ಪ್ರತಿಕ್ರಿಯೆಗಳಲ್ಲಿ ಬಹುಪಾಲು ಕೃಷಿ ಕಾನೂನುಗಳನ್ನು ಬೆಂಬಲಿಸಿದ್ದವು.
ವರದಿ ಪ್ರಕಾರ, ಮೂರೂ ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಬಗ್ಗೆ ಸುಪ್ರೀಂಕೋರ್ಟ್ ಸಮಿತಿ ಮಾಡಿರುವ ಪ್ರಮುಖ ಶಿಫಾರಸುಗಳು ಹೀಗಿವೆ:
* ಕೃಷಿ ಕಾಯಿದೆಗಳ ರದ್ದತಿ ಅಥವಾ ದೀರ್ಘಾವಧಿ ಅಮಾನತಿನಿಂದ ಕೃಷಿ ಕಾನೂನುಗಳನ್ನು ಬೆಂಬಲಿಸುವ ಆದರೆ ಮೌನವಾಗಿರುವ ಬಹುಸಂಖ್ಯಾತರಿಗೆ ಅನ್ಯಾಯವಾಗುತ್ತದೆ.
advertisement
9535127775 / 9901837775 / 6364528715 / 08362775155 / https://icsmpucollege.com/
* ಕಾನೂನು ಜಾರಿಗೊಳಿಸುವಾಗ ರಾಜ್ಯ ಸರ್ಕಾರಗಳಿಗೆ ಕೆಲ ಸಡಿಲಿಕೆ ಮಾಡಬಹುದಾಗಿದ್ದು ಇದರಿಂದ ಕೃಷಿ ಮಾರುಕಟ್ಟೆಗಳಲ್ಲಿ ಪರಿಣಾಮಕಾರಿ ಸ್ಪರ್ಧೆಯನ್ನು ಉತ್ತೇಜಿಸುವ ಮತ್ತು ‘ಒಂದು ರಾಷ್ಟ್ರ, ಒಂದು ಮಾರುಕಟ್ಟೆ’ ಸೃಷ್ಟಿಸುವ ಕಾಯಿದೆಗಳ ಧ್ಯೇಯ ಸಾಕಾರವಾಗುತ್ತದೆ.
* ಸಿವಿಲ್ ನ್ಯಾಯಾಲಯಗಳು ಅಥವಾ ರಾಜಿ ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಇತ್ಯರ್ಥಕ್ಕೆ ಪರ್ಯಾಯ ಕಾರ್ಯವಿಧಾನಗಳನ್ನು ಭಾಗೀದಾರರಿಗೆ ಒದಗಿಸಬಹುದು.
*ಈ ಕಾಯಿದೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅವುಗಳನ್ನು ಸುಗಮಗೊಳಿಸಲು ಕೇಂದ್ರ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸದಸ್ಯತ್ವದಲ್ಲಿ ಕೃಷಿ ಮಾರುಕಟ್ಟೆ ಮಂಡಳಿ ರಚಿಸಬಹುದು.
* ಕೃಷಿ ಮೂಲಸೌಕರ್ಯವನ್ನು ಬಲಪಡಿಸಲು, ಸಹಕಾರಿ ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ಕೃಷಿ ಉತ್ಪನ್ನಗಳ ಒಗ್ಗೂಡಿಸುವಿಕೆ, ಮೌಲ್ಯಮಾಪನ ಮತ್ತು ಗುಣಮಟ್ಟದ ವಿಂಗಡಣೆ ಸಕ್ರಿಯಗೊಳಿಸಲು ಮತ್ತು ರೈತರು ಹಾಗೂ ಗೋದಾಮುಗಳು/ ಸಂಸ್ಕರಣೆದಾರರು/ ರಫ್ತುದಾರರು/ಚಿಲ್ಲರೆ ವ್ಯಾಪಾರಿಗಳು/ಬೃಹತ್ ಖರೀದಿದಾರರ ನಡುವೆ ನಿಕಟ ಸಂವಾದಕ್ಕೆ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು. .
ನಿಮ್ಮ ಕಾಮೆಂಟ್ ಬರೆಯಿರಿ