ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ: ಕೊಡಬಾರದೆಂದು ಕಾಂಗ್ರೆಸ್ ಸರ್ಕಾರವೇ ಕಾನೂನು ತಂದಿದೆ ಎಂದ ಸಚಿವ ಮಾಧುಸ್ವಾಮಿ

ಬೆಂಗಳೂರು: ರಾಜ್ಯದ ದೇವಾಲಯಗಳ ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಯು.ಟಿ. ಖಾದರ್ ವಿಷಯ ಪ್ರಸ್ತಾಪಿಸಿ, ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಾಮರಸ್ಯ, ಸಹೋದರತ್ವ ಇರಬೇಕು. ಆದರೆ, ಕೆಲ ಕ್ರೂರ ಮನಸ್ಸಿನವರು ಕೆಲವೆಡೆ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಸಮಾಜದವರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿದ್ದಾರೆ. ಅವರು ಕೆಟ್ಟ ಮನಸ್ಸಿನವರು, ಕ್ರೂರಿಗಳು, ಹೇಡಿಗಳು ಎಂದು ಹೇಳಿದಾಗ ಆಬಿಜೆಪಿಯ ರಘುಪತಿ ಭಟ್, ಹರೀಶ್ ಪೂಂಜಾ, ಸಂಜೀವ್ ಮಠ್ದೂರ್, ರೇಣುಕಾಚಾರ್ಯ ಸೇರಿದಂತೆ ಹಲವು ಸದಸ್ಯರು ಖಾದರ್ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.

ಹೇಡಿಗಳು ಯಾರು ಎಂದು ಖಾದರ್ ಹೇಳಬೇಕು ಎಂದು ರಘುಪತಿ ಭಟ್ ಮತ್ತು ಹರೀಶ್ ಪೂಂಜಾ ಪಟ್ಟು ಹಿಡಿದರು. ಆಗ ಖಾದರ್, ನಾನು ಯಾವುದೇ ಧರ್ಮದ ಹೆಸರು ಪ್ರಸ್ತಾಪ ಮಾಡಿಲ್ಲ. ಬಿಜೆಪಿ ಸದಸ್ಯರಿಗೆ ಆತಂಕ ಏಕೆ ಎಂದು ಹೇಳಿದರು. ಆದರೆ ಬಿಜೆಪಿ ಸದಸ್ಯರು ಖಾದರ್ ವಿರುದ್ಧ ಹರಿಹಾಯ್ದರು.
ಗದ್ದಲದಲ್ಲೇ ಮಾತನಾಡಿದ ರೇಣುಕಾಚಾರ್ಯ, ನಮ್ಮ ಮಠಗಳು, ದೇವಸ್ಥಾನಗಳಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ಕೊಡುತ್ತೇವೆ. ಮಸೀದಿಗೆ ಹೋಗಲು ಬಿಡುತ್ತಾರಾ ಎಂದು ಪ್ರಶ್ನೆ ಮಾಡಿ ಹೇಡಿ ಎಂಬ ಪದವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗಳು ನಡೆದವು. ಆಗ ಸಭಾಧ್ಯಕ್ಷರು ಕಾನೂನ ಸಚಿವ ಮಾಧುಸ್ವಾಮಿಯವರೇ ನೀವೇ ಸರಿಪಡಿಸಿ ಎಂದು ಹೇಳಿದಾಗ, ಸಚಿವ ಮಾಧುಸ್ವಾಮಿ ಆಡಳಿತ ಪಕ್ಷದ ಸದಸ್ಯರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಮತ್ತೆ ಮಾತು ಮುಂದುವರೆಸಿದ ಖಾದರ್, ಕೆಲವು ಧರ್ಮಕ್ಷೇತ್ರಗಳಲ್ಲಿ ಮುಸ್ಲಿಂ ಬಾಂಧವರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬ್ಯಾನರ್ ಹಾಕಿದ್ದಾರೆ. ಇದು ಸರಿಯಲ್ಲ. ಕೆಲವೆಡೆ ಹಿಂದೂಗಳೇ ಈ ಬ್ಯಾನರ್‌ಗಳನ್ನು ತೆಗೆದಿಸಿದ್ದಾರೆ ಅವರಿಗೆ ಅಭಿನಂದನೆ. ಇಂತಹ ಸಾಮರಸ್ಯ ಕದಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಟ್ಟ ಹಾಕಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ಸಾಮರಸ್ಯ ಪರಂಪರೆ ಇತಿಹಾಸ ನಮ್ಮದು. ಅದನ್ನು ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ. ಒಂದು ಸಮುದಾಯದ ವ್ಯಾಪಾರಿಗಳು ಬರಬಾರದು ಎಂದ ಬ್ಯಾನರ್‌ ಹಾಕುವುದು ಸರಿಯಲ್ಲ. ಮಾರಿಗುಡಿ, ಬಪ್ಪನಾಡುದುರ್ಗಾ, ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾಪಿಸಿರುವುದೇ ಮುಸ್ಲಿಂ ಸಮುದಾಯದವರು ಎಂದರು.
ಸದಸ್ಯರ ಮಾತಿಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ೨೦೦೨ರ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ. ಇದು ಕಾಂಗ್ರೆಸ್ ಸರ್ಕಾರವಿದ್ದಾಗಲೇ ಜಾರಿಗೆ ತಂದಿದ್ದು. ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಎಂದಿರುವುದಕ್ಕೆ ನಾವೇನೂ ಮಾಡಲಿಕ್ಕೆ ಆಗುವುದಿಲ್ಲ. ದೇವಸ್ಥಾನದ ಆವರಣ ಬಿಟ್ಟು ಹೊರಗಡೆ ಇಂಥ ಸಮಸ್ಯೆ ಬಂದರೆ ಅದನ್ನು ಸರಿಪಡಿಸಬಹುದು ಎಂದು ಹೇಳುವ ಮೂಲಕ ಈ ಚರ್ಚೆಗೆ ತೆರೆ ಎಳೆದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement