ಮೇಕೆದಾಟು; ತಮಿಳುನಾಡು ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯ ಖಂಡಿಸಿ ಹಾಗೂ ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಜೋಡಣೆ ಯೋಜನೆ ವಿರೋಧಿಸಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಈ ಖಂಡನಾ ನಿರ್ಣಯವನ್ನು ಮಂಡಿಸಿದರು. ಬಳಿಕ ಸದನ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಿತು. ನದಿ ಜೋಡಣೆಯ ಡಿಪಿಆರ್‌ ಅನ್ನು ಕರ್ನಾಟಕ ಸರ್ಕಾರ ಒಪ್ಪುವವರೆಗೆ ಅನುಮೋದಿಸದಂತೆ ಎಂಬ ತಿದ್ದುಪಡಿಯೊಂದಿಗೆ ನಿರ್ಣಯವು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ತಮಿಳುನಾಡು ರಾಜ್ಯಕ್ಕೆ ಯಾವುದೇ ಹಾನಿಯಾಗದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಖಂಡನೆ ಮಾಡಲಾಯಿತು. ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ಒತ್ತಾಯ ಮಾಡಲಾಯಿತು.
ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೆ-ಗುಂಡಾರ್ ನದಿಗಳ ಜೋಡಣೆ ಯೋಜನೆಯನ್ನು ಅಂತಿಮಗೊಳಿಸಬಾರದು. ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳಿಗೆ ಅನುಮೋದನೆ ನೀಡಬಾರದು ಮತ್ತು ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶಿಸಲು ಸಂಬಂಧಪಟ್ಟ ಕೇಂದ್ರದ ಸಂಸ್ಥೆಗಳನ್ನು ಒತ್ತಾಯಿಸುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ಹಂಚಿಕೆ ಮಾಡಿರುವಂತೆ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಟಿಎಂಸಿ (4.75 ಟಿಎಂಸಿ ) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಮಾಣವಾಗಿ ಜಲವಿದ್ಯುತ್ ಉತ್ಪಾದನೆಗೆ ಅಂತರ್-ರಾಜ್ಯ ನದಿ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸಲಾಗಿದೆ. ಈ ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಬಾಧಕ ಅಥವಾ ಹಾನಿಯಾಗುವುದಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ತಮ್ಮ ಚೊಚ್ಚಲ ಬಜೆಟ್‌ ಮಂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ಮೇಕೆದಾಟು ಯೋಜನೆಗಾಗಿ 1000 ಕೋಟಿ ರೂ. ಅನುದಾನ ಮೀಸಲಿರಿಸಿದ್ದರು. ಅದಲ್ಲದೇ ಕಾಂಗ್ರೆಸ್‌ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಎರಡು ಹಂತದಲ್ಲಿ ಪಾದಯಾತ್ರೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ನಿರ್ಣಯದ ಪ್ರಮುಖ ಅಂಶಗಳು
ತಮಿಳುನಾಡು ರಾಜ್ಯಕ್ಕೆ ಯಾವುದೇ ಹಾನಿಯಾಗದ ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಖಂಡಿಸುತ್ತದೆ. ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವನ್ನು ಒತ್ತಾಯಿಸುತ್ತದೆ.
ಕರ್ನಾಟಕ ರಾಜ್ಯವು ಯೋಜಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ, ದಿನಾಂಕ 21/3/2022 ರಂದು ತಮಿಳುನಾಡು ವಿಧಾನ ಸಭೆಯು ಸಭ್ಯವಲ್ಲದ ಭಾಷೆಯಲ್ಲಿ ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಸಮರ್ಥನೀಯವಲ್ಲದ ನಿರ್ಣಯವನ್ನು ಮತ್ತು ತಮಿಳುನಾಡು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕಪಕ್ಷೀಯವಾಗಿ ಯೋಜಿಸಿರುವ ಕಾನೂನುಬಾಹಿರ ಯೋಜನೆಗಳನ್ನು ಸಹ ಈ ಸದನವು ಗಣನೆಗೆ ತೆಗೆದುಕೊಂಡಿರುತ್ತದೆ.
ಸರ್ವೋಚ್ಚ ನ್ಯಾಯಾಲಯವು ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲಿ ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರಿನ ಪ್ರಮಾಣವನ್ನು ಖಚಿತಪಡಿಸುವಂತೆ ನಿಗದಿಪಡಿಸಿದೆ. ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಭಾಧಕ ಅಥವಾ ಹಾನಿಯಾಗುವುದಿಲ್ಲ. ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ನಿರ್ಮಿಸಲು ಕರ್ನಾಟಕ ರಾಜ್ಯವು ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.
ರಾಷ್ಟ್ರೀಯ ಜಲನೀತಿಯೂ ಸಹ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ಕುಡಿಯುವ ನೀರಿನ ಯೋಜನೆಯಿಂದ ನ್ಯಾಯಾಧಿಕರಣದ ಆದೇಶವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸುವುದಿಲ್ಲ. ಕರ್ನಾಟಕದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಾವೇರಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಮೂಲಕ ತಮಿಳುನಾಡು ರಾಜ್ಯವು ಏಕಪಕ್ಷೀಯವಾಗಿ ಹಲವಾರು ಕಾನೂನುಬಾಹಿರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕರ್ನಾಟಕದ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸೋಮವಾರ ಮೇಕೆದಾಟು ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಖಂಡನಾ ನಿರ್ಣಯ ಕೈಗೊಂಡಿತ್ತು. ತಮಿಳುನಾಡು ವಿಧಾನಸಭೆಯಲ್ಲಿ ಅಲ್ಲಿನ ಜಲ ಸಂಪನ್ಮೂಲ ಸಚಿವ ದುರೈಮುರುಗನ್ ಕರ್ನಾಟಕ ಸರ್ಕಾರದ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಿದ್ದರು. ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದರು. ದುರೈಮುರುಗನ್ ಮಂಡಿಸಿದ್ದ ಖಂಡನಾ ನಿರ್ಣಯ ತ‌ಮಿಳುನಾಡು ವಿಧಾನಸಭೆಯಲ್ಲಿ ಒಮ್ಮತದಿಂದ ಅಂಗೀಕಾರವಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement