ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ-ಒಂದು ಅವಲೋಕನ

posted in: ರಾಜ್ಯ | 0

(ಧಾರವಾಡ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಆರ್.ಎನ್. ಶೆಟ್ಟಿ ಕ್ರಿಡಾಂಗಣದ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ ಮಾರ್ಚ್‌ ೨೬, ೨೭ ರಂದು ಎರಡು ದಿನಗಳ ಕಾಲ ನಡೆಯಲಿದೆ)

ಧಾರವಾಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದ ವಿವರ ಪಿಡಿಎಫ್‌ನಲ್ಲಿದೆ-ಇಲ್ಲಿ ಕ್ಲಿಕ್‌ ಮಾಡಿ ನೋಡಬಹುದು dharwad sahitya sammelana programme information

ಕರ್ನಾಟಕದ ಸಾಂಸ್ಕೃತಿಕ ನಕ್ಷೆಯಲ್ಲಿ ಧಾರವಾಡಕ್ಕೆ ಅನುಪಮವಾದ ಸ್ಥಾನವಿದೆ. ಸಾಂಸ್ಕೃತಿಕ ರಾಜಧಾನಿ ಎಂದು ಪ್ರಸಿದ್ಧವಾದ ಧಾರವಾಡಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಸಾಹಿತಿಗಳು, ಕವಿಗಳು, ಸಂಗೀತಕಾರರ, ಕಲಾವಿದರ ನೆಲೆ ಬೀಡಾಗಿ, ಶೈಕ್ಷಣಿಕ ಸ್ಥಾನವಾಗಿ ಧಾರವಾಡ ವಿದ್ಯಾನಗರಿ, ಸಾಂಸ್ಕೃತಿಕ ನಗರಿ ಎಂದೇ ಕರೆಯಲ್ಪಡುತ್ತದೆ. ನೆಲ, ಜಲ, ಗಾಳಿಯ ಪ್ರಭಾವದೊಂದಿಗೆ ಕನ್ನಡದ ಕೆಚ್ಚು ಒಂದುಗೂಡಿ ಕನ್ನಡ ನಾಡು ನುಡಿಯ ಏಳಿಗೆಯ ಕಾರ್ಯಗಳೆಲ್ಲ ಪ್ರಾರಂಭವಾಗಿರುವುದು ಧಾರವಾಡದಲ್ಲಿಯೇ.
ಕರ್ನಾಟಕ ಏಕೀಕರಣ – ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ, ಕನ್ನಡ ನಾಡು ನುಡಿ ರಕ್ಷಣೆಗೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಜಮಖಾನೆಗಳಿಗೆ ನವಲಗುಂದ, ವ್ಯಾಪಾರಕ್ಕೆ ಹುಬ್ಬಳ್ಳಿ, ಬಣ್ಣದ ತೊಟ್ಟಿಲಕ್ಕೆ ಕಲಘಟಗಿ, ಮೆಣಸಿನಕಾಯಿಗೆ ಕುಂದಗೋಳ, ವಿದ್ಯೆಗೆ ಧಾರವಾಡ ಎಂದು ರಾಜ್ಯದಲ್ಲಿ ಹೆಸರು ವಾಸಿಯಾಗಿವೆ. ಕನ್ನಡಕ್ಕೆ ಕುತ್ತು ಬಂದಾಗ ಪ್ರತಿಭಟನೆಯ ಕೂಗು ಆರಂಭವಾಗುವುದು ಧಾರವಾಡ ಜಿಲ್ಲೆಯಿಂದಲೇ. ೧೩೧ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮತ್ತು ಕನ್ನಡ ಪರ ಕಾರ್ಯ ಚಟುವಟಿಕೆಗಳಿಗೆ ಬುನಾದಿ ಹಾಕಿದ್ದು ಐತಿಹಾಸಿಕ ಘಟನೆಗಳಲ್ಲೊಂದು. ಕನ್ನಡ ಸಾಹಿತ್ಯ ಸಮ್ಮೇಳನಗಳು ಬೆಂಗಳೂರು-ಮೈಸೂರುಗಳಲ್ಲಿ ನಡೆಯುವುದನ್ನು ತಪ್ಪಿಸಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುವಂತೆ ಮಾಡಿದ್ದು ಧಾರವಾಡ ಜಿಲ್ಲೆಯ ಸಾಹಿತಿಗಳು.
ಜಿಲ್ಲೆಗೊಂದು ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆ ಸ್ಥಾಪಿಸಬೇಕೆಂಬ ನಿಧಾರದಂತೆ ೧೯೭೦ರಲ್ಲಿ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಖ್ಯಾತ ಸಾಹಿತಿ ಬಸವರಾಜ ಕಟ್ಟಿಮನಿ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವದಲ್ಲಿ ಬಂದಿತು. ಅಂದಿನಿಂದ ಇಂದಿನವರೆಗೆ ಜಿಲ್ಲಾ ಸಮ್ಮೇಳನಗಳನ್ನು, ತಾಲೂಕ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ಏಕೈಕ ಸಂಸ್ಥೆಯಾಗಿ ಬೆಳೆದಿದುದರಿಂದ ಅಧಿಕಾರ ವಿಕೇಂದ್ರಿಕರಣ ತತ್ವದಂತೆ ಜಿಲ್ಲಾ ತಾಲೂಕು ಘಟಕಗಳನ್ನು ಸ್ಥಾಪಿಸಿ ಹೋಬಳಿ ಗ್ರಾಮ ಮಟ್ಟದಲ್ಲಿ ಅಸ್ತಿತ್ವ ಪಡೆದು ಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳನ್ನು ಹೊಂದಿದೆ. ಇದರಿಂದ ಆಯಾ ಜಿಲ್ಲೆ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯುವುದರಿಂದ ಕವಿಗಳಿಗೆ, ಸಾಹಿತಿಗಳಿಗೆ ಕಲಾವಿದರಿಗೆ ಸಹೃದಯರಿಗೆ ಭಾಗವಹಿಸಲು ಅನುಕೂಲವಾಗಿದೆ. ಸಂಸ್ಮರಣೆ ಗ್ರಂಥಗಳು ಇತರ ಗ್ರಂಥಗಳ ಪ್ರಕಟನೆಯಿಂದ ಆ ಭಾಗದ ಶಿಲ್ಪ, ಇತಿಹಾಸ, ಸಾಹಿತ್ಯ, ಸಾಮಾಜಿಕ – ಸಾಂಸ್ಕೃತಿಕ ಚಟುವಟಿಕೆಗಳು ಬೆಳಕಿಗೆ ಬರಲು ಅವಕಾಶ ಕಲ್ಪಸಿದಂತಾಗಿದೆ.
ಬಸವರಾಜ ಕಟ್ಟಿಮನಿ, ವರದರಾಜ ಹುಯಿಲಗೋಳ, ಡಾ.ಗುರುಲಿಂಗ ಕಾಪನೆ, ಜಿ.ಬಿ. ಮನ್ಪಾಚಾರ, ಡಾ. ಶಿವಾನಂದ ಗಾಳಿ, ಡಾ. ವೀರಣ್ಣ ರಾಜೂರ, ಡಾ. ಮಧು ವೆಂಕಾರೆಡ್ಡಿ , ಡಾ.ಡಿ.ಎಂ. ಹಿರೇಮಠ ಅಧ್ಯಕ್ಷರಾಗಿ ರಚನಾತ್ಮಕ ಕಾರ್ಯಗಳನ್ನು ಮಾಡಿದ್ದು ಈಗ ಡಾ.ಲಿಂಗರಾಜ.ಆರ್.ಅಂಗಡಿ ಅವರು ೩ನೇ ಬಾರಿಗೆ ಅಧ್ಯಕ್ಷರಾಗಿ ಪ್ರೊ. ಕೆ.ಎಸ್. ಕೌಜಲಗಿ ಮತ್ತು ಡಾ.ಜಿನದತ್ತ ಹಡಗಲಿ ಕಾರ‍್ಯದರ್ಶಿಗಳಾಗಿ ಮತ್ತು ಪ್ರೊ.ಎಸ್.ಎಸ್. ದೊಡ್ಡಮನಿ ಕೋಶಾಧ್ಯಕ್ಷರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳನ್ನು, ಸಾಹಿತ್ಯ ವಿಚಾರ ಸಂಕಿರಣಗಳನ್ನು, ಕವಿಗೋಷ್ಠಿಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ನಿರಂತರವಾಗಿ ನಡೆಸುತ್ತ ಬಂದಿದೆ. ಡೆಪ್ಯೂಟಿ ಚೆನ್ನಬಸಪ್ಪನವರ ಶತಮಾನೋತ್ಸವ, ಪಂಪನ ಸಹಸ್ರಮಾನೋತ್ಸವ, ಪ್ರೊ. ಬಸವನಾಳ ಶತಮಾನೋತ್ಸವ, ಸರ್ವಜ್ಞ ಕವಿಯ ಮೂರನೆಯ ಶತಮಾನೋತ್ಸವ, ಅತ್ತಿಮಬ್ಬೆ ಸಹಸ್ರಮಾನೋತ್ಸವ, ಮರೆಯಲಾಗದ ಮಹನೀಯರ ಸಾಹಿತ್ಯ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರ ಪ್ರಶಂಸೆ ಪಾತ್ರವಾಗಿದೆ.
ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಡಾ. ಆರ್. ಸಿ. ಹಿರೇಮಠ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಜಿನದತ್ತ ದೇಸಾಯಿ, ಡಾ. ಶಿವಾನಂದ ಗಾಳಿ, ಡಾ. ಗಿರಡ್ಡಿ ಗೊವಿಂದರಾಜ, ಮಾಲತಿ ಪಟ್ಟಣಶೆಟ್ಟಿ, ಡಾ. ಬಸವರಾಜ ಸಾದರ ಮುಂತಾದವರು ಈ ಮೊದಲಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದಾರೆ, ೧೪ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಾಧ್ಯಾಪಕರು ಮತ್ತು ಪ್ರಕಾಶಕರಾದ ಡಾ. ರಮಾಕಾಂತ ಜೋಶಿ ಆಯ್ಕೆಯಾಗಿದ್ದಾರೆ.
ಸರ್ಕಾರ, ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಿಂದ ಸಾಹಿತ್ಯ ಸಮ್ಮೇಳನದಲ್ಲಿ ಉಳಿಸಿದ ಹಣದಿಂದ ೩೦ ಲಕ್ಷ ರೂ.ಗಳ ವೆಚ್ಚದಲ್ಲಿ ೧೯೯೫ ರಲ್ಲಿ ೪೪ ಗುಂಟೆಯ ನಿವೇಶನದಲ್ಲಿ ಸುಂದರವಾದ ಆಧುನಿಕ ವಾಸ್ತಿಶಿಲ್ಪ ವಿನ್ಯಾಸ ಹೊಂದಿದ ಸಾಹಿತ್ಯ ಭವನ ಸಾಹಿತಿಗಳಿಗೆ ಭೂಷಣಪ್ರಾಯವಾಗಿದೆ. ಸಭಾಭವನಕ್ಕೆ ಸಂಸದರು ಮತ್ತು ಕೇಂದ್ರ ಸರಕಾರದ ಸಚಿವರಾದ ಪ್ರಲ್ಹಾದ ಜೋಶಿ ೧೦ ಲಕ್ಷ, ಡಾ. ಪ್ರಭಾಕರ ಕೋರೆ ೧೦ ಲಕ್ಷ, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ೧೦ ಲಕ್ಷ ಲಕ್ಷ, ಪ್ರೊ ಎಸ್.ವಿ. ಸಂಕನೂರ ೫ ಲಕ್ಷ ಲಕ್ಷ, ಡಾ. ವೀರಣ್ಣ ಮತ್ತಿಕಟ್ಟಿ ೫ ಲಕ್ಷ, ಅರವಿಂದ ಬೆಲ್ಲದ ೫. ಲಕ್ಷ ರೂ.ಗಳು, ಪ್ರದೀಪ ಶೆಟ್ಟರ ೫ ಲಕ್ಷ ರೂ.ಗಳು ಅನುದಾನಗಳನ್ನು ನೀಡಿ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹಿಸಿದ್ದಾರೆ.
ಡಾ. ಲಿಂಗರಾಜ ಅಂಗಡಿ ಅಧ್ಯಕ್ಷರಾದ ನಂತರ ಸದಸ್ಯರ ಸಂಖ್ಯೆ ೬೦೦೦ ಮೀರಿದೆ. ಗ್ರಾಮೀಣ ಭಾಗಗಳಲ್ಲಿಯೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ೮೫ ಕ್ಕೂ ಹೆಚ್ಚಿನ ದತ್ತಿಗಳನ್ನು ದಾನಿಗಳ ನೆರವಿನಿಂದ ಆಯೋಜಿಸುತ್ತಿದ್ದಾರೆ. ಅವರ ನೇತೃತ್ವದ ತಂಡವು ೨೦೧೯ ರಲ್ಲಿ ೮೪ನೇಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉತ್ತಮವಾಗಿ ಸಂಘಟಿಸಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ೨೫ ಲಕ್ಷಕ್ಕೂ ಹೆಚ್ಚಿನ ಹಣವನ್ನು ಈ ಸಮ್ಮೇಳನದಲ್ಲಿ ಉಳಿತಾಯ ಮಾಡಿದ್ದು, ಇನ್ನೊಂದು ವೈಶಿಷ್ಟ್ಯವೆಂದರೆ ಸಾರ್ವಜನಿಕಕರು ಮತ್ತು ಸಂಘ ಸಂಸ್ಥೆಗಳಿಂದ ದೆಣಿಗೆ ಪಡೆಯದೆ ೨೦೦೨ ರಿಂದ ಡಾ. ಲಿಂಗರಾಜ ಅಂಗಡಿ ಅವರು ಜಿಲ್ಲಾ ಮತ್ತು ತಾಲೂಕ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದಾರೆ.
ರಾಜ್ಯದ ಕನ್ನಡ ಸಾಹಿತ್ಯ ನೂತನ ಅಧ್ಯಕ್ಷ ಡಾ. ಮಹೇಶ ಜೋಶಿ ಸದಸ್ಯರ ಸಂಖ್ಯೆಯನ್ನು ೧ ಕೋಟಿಗೆ ಹೆಚ್ಚಿಸಲು ಸಂಕಲ್ಪ ಮಾಡಿದ್ದು, ಸದಸ್ಯರ ಹಣವನ್ನು ರೂ. ೨೫೦/- ಮಾಡಿದ್ದಾರೆ.
ನಾಡಿನ ಕವಿ, ಸಾಹಿತಿ ಕಲಾವಿದರ ಸೃಜನ ಶೀಲ ಸಾಹಿತ್ಯ ನಿರ್ಮಾಣಕ್ಕೆ ಪುಸ್ತಕ ಪ್ರಚಾರ – ಪ್ರಕಟಣೆಗೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಧಾರವಾಡ ನೆಲೆಯಾಗಿದೆ. ಸಾಹಿತ್ಯ ಭವನದಲ್ಲಿ ವಾಚನಾಲಯ ಪುಸ್ತಕ ಮಾರಾಟ ಮಳಿಗೆ, ಭಾಷಾ ಪ್ರಯೋಗ ಶಾಲೆ, ಕಾರ್ಯಾಲಯ, ಬಯಲು ಸಭಾಂಗಣ, ವಿಶಾಲ ಸಭಾಗೃಹ, ರಂಗಮಂದಿರ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಸಾಹಿತ್ಯ ಭವನ ಹೊಂದಿದ ಎರಡನೆಯ ಜಿಲ್ಲೆ ಎನಿಸಿದೆ.

ಓದಿರಿ :-   ಗೋವಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿಯ ಮೂವರು ಯುವಕರು ಸಾವು

ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ