ಬೆಂಗಳೂರು: ಸಾವಿರಾರು ಕಲಾವಿದರನ್ನು ಸೃಷ್ಟಿಸುವ ಚಿತ್ರಕಲಾ ಪರಿಷತ್‍ಗೆ ಡೀಮ್ಡ್ (ಸ್ವಾಯತ್ತ) ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಕುಮಾರಕೃಪ ರಸ್ತೆಯಲ್ಲಿ ಇಂದು, ಭಾನುವಾರ ಚಿತ್ರಕಲಾ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ ಸಾವಿರಾರು ಕಲಾವಿದರಿಗೆ ಆಶ್ರಯ ನೀಡಿದೆ. ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತಂದಿದೆ. ಹೀಗಾಗಿ ಚಿತ್ರಕಲಾ ಪರಿಷತ್ ಅನ್ನು ಸ್ವಾಯತ್ತ ವಿವಿಯನ್ನಾಗಿ ಪರಿವರ್ತನೆ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಇದಕ್ಕಾಗಿ ವಿಶೇಷವಾದ ಕಾಯ್ದೆ ರೂಪಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸುತ್ತೇವೆ ಎಂದು ಅವರು ಹೇಳಿದರು.
advertisement
9535127775 / 9901837775 / 6364528715 / 08362775155 / https://icsmpucollege.com/
ಸರ್ಕಾರ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 6 ಪ್ರಾದೇಶಿಕ ಜಿಲ್ಲೆಗಳಲ್ಲಿ ಚಿತ್ರ ಕಲಾ ಗ್ಯಾಲರಿ ಪ್ರಾರಂಭ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಲಾ ಗ್ಯಾಲರಿಗಳನ್ನು ಒಮ್ಮೆಗೆ ಆರಂಭಿಸಲು ಆಗದು. ಆದರೆ ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರಕಲಾ ಗ್ಯಾಲರಿಗಳನ್ನು ಆರಂಭಿಸಿ, ಆ ಭಾಗದ ಕಲಾವಿದರಿಗೆ ನೆರವಾಗುವಂತೆ ಮಾಡಲಾಗುವುದು ಎಂದರು.
ಕೆಲವೇ ಜನರಿಗೆ ಈ ಚಿತ್ರಸಂತೆ ಸೀಮಿತವಾಗಿತ್ತು. ಇಂದು ಸಾರ್ವಜನಿಕರಿಗೆ ಇದನ್ನು ತೆರೆದು ಇಡಲಾಗಿದೆ. ಇದೊಂದು ಅಭೂತಪೂರ್ವ ಕಲ್ಪನೆ. ಇದರಲ್ಲಿ ದೇಶ, ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಕಲೆ ಕೆಲವರಿಗೆ ಕುಲಕಸುಬಾಗಿ ಬಂದಿದೆ. ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಒಂದು ಪ್ರಯತ್ನವಾಗಿದೆ. ಬರುವ ದಿನಗಳಲ್ಲಿ ನಮ್ಮ ಸರ್ಕಾರ ಇಂತಹ ಚಿತ್ರಸಂತೆಗಳಿಗೆ ಹೆಚ್ಚು ಆದ್ಯತೆ ನೀಡಲಿದೆ ಎಂದು ಹೇಳಿದರು.
ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಎಸ್.ಟಿ.ಸೋಮಶೇಖರ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಸಚಿವೆ ರಾಣಿ ಸತೀಶ ಮತ್ತಿತರರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ