ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಮಹಿಳೆಯರಿಗೆ ಒಂದಾದ ಮೇಲೊಂದರಂತೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ.
ಈಗ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ತಾಲಿಬಾನ್‌ಗಳು ಲಿಂಗ ಪ್ರತ್ಯೇಕತೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಒಂದೇ ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಪುರುಷರಿಗೆ ಬುಧವಾರದಿಂದ ಶನಿವಾರದ ವರೆಗೆ ಉದ್ಯಾನವನಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ. ವಾರದ ಉಳಿದ ದಿನ ಮಹಿಳೆಯರು ಅಲ್ಲಿಗೆ ಹೋಗಬಹುದು ೆಂದು ತಾಲಿಬಾನ್ ಆಡಳಿತ ಹೇಳಿದೆ ಎಂದು ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಹೇಳಿದೆ.
ಇಸ್ಲಾಮಿಕ್ ಎಮಿರೇಟ್‌ನ ಮುಜಾಹಿದ್ದೀನ್‌ಗಳು ಸಹ ಶಸ್ತ್ರಾಸ್ತ್ರಗಳು, ಮಿಲಿಟರಿ ಸಮವಸ್ತ್ರಗಳು ಮತ್ತು ವಾಹನಗಳೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ” ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಕಾಬೂಲ್‌ನಲ್ಲಿ ತಾಲಿಬಾನಿಗಳು ಅಧಿಕಾರವನ್ನು ವಶಪಡಿಸಿಕೊಂಡು ಏಳು ತಿಂಗಳು ಕಳೆದಿವೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಆಡಳಿತದ ಆರಂಭದಲ್ಲಿ ಶಿಕ್ಷಣ ಪಡೆಯುವ ಮಹಿಳೆಯರ ಹಕ್ಕುಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಆದರೆ ಕೆಲ ದಿನಗಳ ಹಿಂದೆ ಕಾಬೂಲ್‌ನಲ್ಲಿ ಅಲ್ಲಿನ ಶಿಕ್ಷಣ ಅಧಿಕಾರಿಗಳು ಮಾಧ್ಯಮಿಕ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯ ಬಳಿಕ ಅಫ್ಘಾನ್ ರಾಜಧಾನಿಯಲ್ಲಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಆರನೇ ತರಗತಿಯ ನಂತರ ಶಾಲೆಗಳಿಗೆ ವಿದ್ಯಾರ್ಥಿನಿಯರ ಪ್ರವೇಶವನ್ನು ಮತ್ತೆ ನಿರ್ಬಂಧಿಸಲಾಗಿದೆ.
ತಾಲಿಬಾನ್ ಆಡಳಿತ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಸರ್ಕಾರಿ ಕೆಲಸದಿಂದ ಅವರನ್ನು ತೆಗೆದುಹಾಕಲಾಗಿದೆ. ಅವರು ಹಿಜಾಬ್ ಇಲ್ಲದೆ ಏಕಾಂಗಿಯಾಗಿ ಹೊರಬರುವಂತಿಲ್ಲ. ಹಾಗೂ ಮನೆಯಿಂದ ಹೊರಗೆ ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಅವರ ಜೊತೆಗೆ ಅವರ ಮನೆಯ ಪುರುಷರು ಅವರೊಂದಿಗಿರಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ