ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ನವದೆಹಲಿ: ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಮತ್ತು ಕಾಲೇಜಿನಲ್ಲಿ ಹಿಜಾಬ್‌ಗೆ ಅನುಮತಿ ನೀಡುವ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ಒದಗಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಭೂತ ಹಕ್ಕುಗಳನ್ನು ಪ್ರತಿಪಾದಿಸಿರುವ ಅಗತ್ಯ ಧಾರ್ಮಿಕ ಆಚರಣೆಯ ಸಿದ್ಧಾಂತವನ್ನು ಪರಿಗಣಿಸುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಪ್ರಮುಖ ಸಮಸ್ಯೆಯನ್ನು ಹೈಕೋರ್ಟ್ ಪರಿಹರಿಸಲಿಲ್ಲ ಎಂದು ಎಐಎಂಪಿಎಲ್‌ಬಿ ಹೇಳಿದೆ. ಮಂಡಳಿಯ ಕಾರ್ಯದರ್ಶಿ ಮೊಹಮ್ಮದ್ ಫಜ್ಲುರ್​​ರಹೀಮ್ ಜೊತೆಗೆ ಇಬ್ಬರು ಅರ್ಜಿದಾರರಾದ ಮುನಿಸಾ ಬುಶ್ರಾ ಮತ್ತು ಜಲೀಸಾ ಸುಲ್ತಾನಾ ಯಾಸೀನ್ ಮೂಲಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕೋರ್ಟ್ ತೀರ್ಪನ್ನು “ತಪ್ಪು” ಎಂದು ಕರೆದ ಮಂಡಳಿಯು ತನ್ನ ಅರ್ಜಿಯಲ್ಲಿ ಈ ಕ್ರಮವು ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಮತ್ತು ನಿರ್ದಿಷ್ಟವಾಗಿ ಮುಸ್ಲಿಂ ಬಾಲಕಿಯರ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತದೆ ಎಂದು ಹೇಳಿದೆ.

ಒಂದು ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ‘ಬಟ್ಟೆಯೊಂದರಿಂದ ಕೂದಲು ಮುಚ್ಚಲು’ ಅವಕಾಶ ನೀಡದೆ ಸಮವಸ್ತ್ರದಲ್ಲಿ “ಏಕರೂಪತೆ” ತರುವುದಕ್ಕೆ ಹೆಚ್ಚು ಒತ್ತು ನೀಡಿರುವುದು ಸರಿಯಲ್ಲ. ಅಗತ್ಯ ಧಾರ್ಮಿಕ ಆಚರಣೆಯ ತತ್ವಗಳ ಅಡಿಯಲ್ಲಿ ‘ಅಗತ್ಯತೆʼಗಳ ನಿರ್ಣಯ ಎಂಬುದು ಧಾರ್ಮಿಕ ಪಂಗಡದ ಸಂಪೂರ್ಣ ಸ್ವಾಯತ್ತತೆಯೊಳಗೆ ಬರುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅರ್ಜಿಯಲ್ಲಿ ಹೇಳಿದೆ.
ಕಾಲಕ್ರಮೇಣ ರಾಜ್ಯದ ಅಂಗಗಳು ಧರ್ಮಗಳನ್ನು ನಿಯಂತ್ರಿಸುವ ಸಲುವಾಗಿ ನಮ್ಮ ದೇಶದಲ್ಲಿ ಆಚರಣೆಯಲ್ಲಿರುವ ಯಾವುದೇ ಮತ್ತು ಪ್ರತಿ ಧರ್ಮದ ಅಗತ್ಯತೆ ಮತ್ತು ಅವಿಭಾಜ್ಯ ಸಂಗತಿಗಳು ಯಾವುವು ಎಂಬುದನ್ನು ನಿರ್ಧರಿಸುವ ಕೆಲಸವನ್ನು ನ್ಯಾಯಾಲಯಗಳು ಸಂಪೂರ್ಣವಾಗಿ ತಮ್ಮ ಮೇಲೆ ವಹಿಸಿಕೊಂಡಿವೆ ಎಂದು ತೋರುತ್ತದೆ. ಎಲ್ಲ ವಿದ್ಯಾರ್ಥಿಗಳನ್ನು ಏಕರೂಪವಾಗಿ ಪರಿಗಣಿಸುವ ಮೂಲಕ ಅರ್ಥವಾಗುವ ವ್ಯತ್ಯಾಸದ ಪರಿಕಲ್ಪನೆಯನ್ನು ಹೈಕೋರ್ಟ್‌ ಸಂಪೂರ್ಣ ತಪ್ಪಾಗಿ ಅರ್ಥೈಸಿದೆ. ಪ್ರಶ್ನೆಗಳನ್ನು ರೂಪಿಸುವಾಗ ಹೈಕೋರ್ಟ್‌ ಸ್ಪಷ್ಟತೆ ಕಾಯ್ದುಕೊಳ್ಳದ ಕಾರಣ, ವೈವಿಧ್ಯಮಯ ಸಾಂವಿಧಾನಿಕ ತತ್ವಗಳ ಮೇಲಿನ ಚರ್ಚೆಗಳು ಪರಿಕಲ್ಪನಾತ್ಮಕವಾಗಿ ಅತಿಕ್ರಮಣಗೊಂಡು ಪರೋಕ್ಷ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಹೇಳಿದೆ.ಶಿಕ್ಷಣ ಹಕ್ಕು ಪಡೆಯಲು ಅರ್ಜಿದಾರರು ಸ್ವಾಭಿಮಾನ ಮತ್ತು ಘನತೆಯನ್ನು ಬದಿಗಿಟ್ಟು ಹಿಜಾಬ್‌ ತೊರೆಯಬೇಕು ಎಂದು ಒತ್ತಾಯಿಸಲಾಗುತ್ತಿದೆ. ಕುರಾನ್‌ನಲ್ಲಿನ ಧರ್ಮಗ್ರಂಥಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ, ಹಿಜಾಬ್ ಆಚರಣೆ ಕಡ್ಡಾಯ ಎಂಬ ಬಗ್ಗೆ ಇಸ್ಲಾಂ ಧರ್ಮದ ಎಲ್ಲಾ ಪಂಥದ ವಿದ್ವಾಂಸರಲ್ಲಿ ಒಮ್ಮತವಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಉಡುಪಿಯ ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ಮುಸ್ಲಿಂ ಹುಡುಗಿಯರು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕು ಕೋರಿ ಸಲ್ಲಿಸಿದ್ದ ಒಂದು ಅರ್ಜಿಯನ್ನು ವಜಾಗೊಳಿಸಿತ್ತು. ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯನ್ನು ರೂಪಿಸುವುದಿಲ್ಲ” ಮತ್ತು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಎರಡು ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಹಿಜಾಬ್‌ ವಿವಾದ ಪ್ರಕರಣದ ತುರ್ತು ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಎರಡು ಬಾರಿ ತಿರಸ್ಕರಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement