ಕರ್ನಾಟಕ ಇತಿಹಾಸ ಪರಿಷತ್ತಿನ ಸಮ್ಮೇಳನದ ಸಮಾರೋಪ, ಚರಿತ್ರೆಯ ಅಧ್ಯಯನಕ್ಕೆ ಐತಿಹಾಸಿಕ ಸತ್ಯ ಹುಡುಕುವ ಪ್ರಾಮಾಣಿಕ ಪ್ರಯತ್ನ ಬೇಕು: ಡಾ. ರಮೇಶ ನಾಯಕ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆತಿಥ್ಯದಲ್ಲಿ ನಡೆದ ೩೧ನೇ ಕರ್ನಾಟಕ ಇತಿಹಾಸ ಪರಿಷತ್ತಿನ ಮಹಾಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಭಾಷಣ ಮಾಡಿದ ಹಂಪಿ ವಿಶ್ವ ವಿದ್ಯಾಲಯದ ವಿತ್ತಾಧಿಕಾರಿ ಡಾ. ರಮೇಶ ನಾಯಕ ಮಾತನಾಡಿ, ಇತಿಹಾಸವು ಜಗತ್ತಿನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿದ್ದು, ಅದಕ್ಕೆ ಕಾರಣ ನಾವೇ ಸೃಷ್ಟಿಸಿಕೊಂಡ ಅವಘಡಗಳು ಎಂದು ಹೇಳಿದರು.
ಅವುಗಳನ್ನು ತಿದ್ದಿಕೊಳ್ಳಲು ಮತ್ತೆ ಇತಿಹಾಸದ ಮೊರೆ ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಇತಿಹಾಸವನ್ನು ಮರೆತವನು ಇತಿಹಾಸವನ್ನು ಮರು ಸೃಷ್ಟಿಸಲಾರ. ಐತಿಹಾಸಿಕ ಸತ್ಯವನ್ನು ಹುಡುಕುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕಾಗಿದೆ. ಚರಿತ್ರೆಯ ಅಧ್ಯಯನ ನಿರಂತರವಾದುದು ಅದಕ್ಕೆ ಭೂತ, ವರ್ತಮಾನ, ಭವಿಷ್ಯತ್‌ಗಳೆಂಬ ಚೌಕಟ್ಟುಗಳಿಲ್ಲ. ಕಾರಣ ಗತಕಾಲದ ಅಧ್ಯಯನ ವರ್ತಮಾನವನ್ನು ಅರ್ಥೈಸುತ್ತದೆ ಮತ್ತು ಅದು ಭವಿಷ್ಯದ ಸೂಚಕವಾಗಿರುತ್ತದೆ. ಉದಾಹರಣೆಗೆ ಗತಕಾಲದಲ್ಲಿ ನಡೆದ ಯುದ್ಧಗಳಿಂದ ನಾವು ಪಾಠ ಕಲಿತಿಲ್ಲ. ಪಾಠ ಕಲಿತಿದ್ದರೆ, ಈಗ ಯುದ್ಧಗಳು ನಡೆಯುತ್ತಿರಲಿಲ್ಲ. ಚರಿತ್ರೆಯ ಅಧ್ಯಯನವೆಂದರೆ, ಅದು ಒಂದು ರಾಜಕೀಯ ಮತ್ತು ಸಾಮಾಜಿಕ ಜವಾಬ್ದಾರಿ ಎಂದರು..
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯರಾದ ಡಾ. ಅಜಿತಪ್ರಸಾದರವರು ಮಾತನಾಡಿ ಇತಿಹಾಸ ಸಂಶೋಧನೆಯೆ ಪ್ರಧಾನವಾಗಿರುವ ಈ ಪರಿಷತ್ತು ರಾಜಕೀಯ ವೇದಿಕೆಯಿಂದ ದೂರ ಉಳಿಯಬೇಕು ಮತ್ತು ಈ ಸಂಸ್ಥೆಯು ಹೊಸ ಹೊಸ ಸಂಶೋಧಕರಿಗೆ ಅವಕಾಶ ಕಲ್ಪಿಸುವ ವೇದಿಕೆಯಾಗಬೇಕು. ಹಾಗೆಯೇ ಹೊಸ ಶಿಕ್ಷಣ ನೀತಿಯ ಪಠ್ಯಕ್ಕೆ ಪೂರಕವಾದ ಸಂಶೋಧನೆಗಳು ಸಮಕಾಲಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿರುತ್ತವೆ. ಮುಂದಿನ ದಿನಮಾನಗಳಲ್ಲಿ ಈ ಪರಿಷತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಾರೈಸಿದರು.
ಕರ್ನಾಟಕ ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಡಾ. ಎಲ್. ಪಿ ಮಾರುತಿ ಮಾತನಾಡಿ, ಕರ್ನಾಟಕ ಇತಿಹಾಸ ಪರಿಷತ್ತು ಯುವ ಸಂಶೋಧಕರಿಗೆ ಉತ್ತಮ ವೇದಿಕೆಯಾಗಿದ್ದು, ಹೆಚ್ಚು ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲು ಅವಕಾಶ ನೀಡುತ್ತ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಕವಿವಿ ಸಿಂಡಿಕೇಟ್‌ ಸದಸ್ಯರಾದ ಸುಧೀಂದ್ರ ದೇಶಪಾಂಡೆ ಮಾತನಾಡಿ, ಇತಿಹಾಸ ವಿಜ್ಞಾನವೂ ಹೌದು, ವಿಜ್ಞಾನ ಇತಿಹಾಸವು ಹೌದು ಇದರ ಬಗ್ಗೆ ಹೆಚ್ಚು ಸಂಶೋಧನೆಗಳಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಆ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಅಗತ್ಯ ಎಂದರು.
ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆಯ ನಿರ್ದೇಶಕರಾದ ಡಾ. ವಿಠ್ಠಲ ಬಡಿಗೇರ, ಇತಿಹಾಸವೆಂದರೆ ಕೇವಲ ರಾಜಮಹಾರಾಜರ ಸಾಧನೆಗಳು ಮಾತ್ರವಲ್ಲ, ಆ ಕಾಲದ ಜನ ಸಾಮಾನ್ಯರ ಬದುಕನ್ನು ತಿಳಿಯುವ ತಲಸ್ಪರ್ಶಿ ಅಧ್ಯಯನ ನಡೆಯಬೇಕು ಎಂದರು.
ಧಾರವಾಡ ವಲಯದ ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಶೇಜೇಶ್ವರ ಮಾತನಾಡಿ, ಕರ್ನಾಟಕ ಇತಿಹಾಸ ಕಾಂಗ್ರೆಸ್‌ ಐತಿಹಾಸಿಕ, ಪಾರಂಪರಿಕ ವಿಚಾರಗಳನ್ನೊಳಗೊಂಡ ಜಿಲ್ಲಾವಾರು ಕೈಪಿಡಿಗಳನ್ನು ಸಿದ್ಧಪಡಿಸಿದರೆ, ಆಯಾ ಜಿಲ್ಲೆಯ ಸಮಗ್ರ ಇತಿಹಾಸದ ಬಗ್ಗೆ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದರು.
ರಾಜ್ಯ ಪತ್ರಾಗಾರ ಇಲಾಖೆ ಧಾರವಾಡ ವಲಯದ ಸಹಾಯಕ ನಿರ್ದೇಶಕರಾದ ಡಾ.ಮಂಜುಳಾ ಎಲಿಗಾರ ಮಾತನಾಡಿ, ಇತಿಹಾಸದ ಪುನರ್ ರಚನೆಯಲ್ಲಿ ವಿದ್ವಾಂಸರ ಸಕ್ರೀಯ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚಿನ ಸಂಶೋಧನೆಗೆ ಪ್ರೇರಕವಾಗಿರುತ್ತದೆ ಎಂದರು.
ಚೈತ್ರಾ ಪ್ರಾರ್ಥಿಸಿದರು ಡಾ. ಎನ್.ವಿ ಅಸ್ಕಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಾಸುದೇವ ಬಡಿಗೇರ ಅವರು ಸ್ವಾಗತಿಸಿದರು, ಡಾ.ಈರಣ್ಣ ಪತ್ತಾರ ವಂದಿಸಿದರು. ಕ.ವಿ.ವಿಯ ವಿಶ್ರಾಂತ ಕುಲಸಚಿವ ಡಾ. ಎಸ್. ರಾಜಶೇಖರ, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಆರ್.ಎಂ. ಷಡಕ್ಷರಯ್ಯ, ಪ್ರಾಧ್ಯಾಪಕರಾದ ಡಾ. ಎಸ್.ವೈ ಮುಗಳಿ, ಡಾ. ಆರ್.ವಿ ಚಿಟಗುಪ್ಪಿ, ಡಾ. ಜಿನದತ್ತ ಹಡಗಲಿ, ಡಾ. ವಿಷ್ಣುವರ್ಧನ, ಮಹಾವೀರ ಉಪಾಧ್ಯೆ, ಜಿನಪ್ಪ ಕುಂದಗೋಳ, ಡಾ. ಬಿ.ಎನ್ ಬಾವಿ ಮೊದಲಾದವರಿದ್ದರು.
ಸನ್ಮಾನ: ಕರ್ನಾಟಕ ಇತಿಹಾಸ ಪರಿಷತ್ತಿನ ೩೧ನೇ ಮಹಾಸಮ್ಮೇಳನ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಅವರನ್ನು ಕರ್ನಾಟಕ ಇತಿಹಾಸ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಡಾ. ಆರ್. ಎಮ್. ಷಡಕ್ಷರಯ್ಯ, ಪ್ರೊ. ಈರಣ್ಣ ಪತ್ತಾರ, ಡಾ. ಅಜಿತ ಪ್ರಸಾದ, ಡಾ. ಜಿನದತ್ತ ಹಡಗಲಿ, ಡಾ. ಆರ್.ವಿ ಚಿಟಗುಪ್ಪಿ, ಮಹಾವೀರ ಉಪಾದ್ಯೆ, ಜಿನಪ್ಪ ಕುಂದಗೋಳ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement