ತ್ರಿವಿಧ ದಾಸೋಹಿ, ನಡೆದಾಡಿದ ದೇವರು ಸಿದ್ಧಗಂಗಾ ಮಠದ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳು

(೦೧.೦೧.೨೦೨೨ ಬೆಳಿಗ್ಗೆ ೧೦.೦೦ ಗಂಟೆಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ೧೧೫ ನೇ ಜಯಂತ್ಯುತ್ಸವ ನಡೆಯಲಿದೆ. ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಕೇಂದ್ರ ಗೃಹ ಸಚಿವರಾದ ಅಮಿತ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೈಸೂರಿನ ಸುತ್ತೂರ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನುಡಿ-ನಮನವನ್ನು ಸಲ್ಲಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಜನ್ಮ ದಿನೋತ್ಸವ ಸಮಿತಿಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಈ ನಿಮಿತ್ತ ಲೇಖನ)

೭೦೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಿದ್ಧಗಂಗಾ ಮಠ ಇಂದು ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತಿದೆ. ೧೨ ನೇ ಶತಮಾನದ ಶರಣರ ಕಾಯಕ, ದಾಸೋಹ ಪ್ರಸಾದ ತತ್ವ ಸಿದ್ದಾಂತ, ಸಮಾನತೆ ಸಂಸ್ಕೃತಿ, ಭಕ್ತ ಪರಂಪರೆಯನ್ನು ೨೧ ನೇ ಶತಮಾನದಲ್ಲಿ ಮುಂದುವರೆಸುತ್ತ ಜಗತ್ತಿಗೆ ಮಾದರಿಯಾಗಿದ್ದವರೇ ಪೂಜ್ಯರಾದ ಡಾ. ಶಿವಕುಮಾರ ಸ್ವಾಮಿಗಳು. ಸಿದ್ಧಗಂಗಾ ತಪಸ್ವಿಗಳ ತಪೋಭೂಮಿಯಾಗಿದೆ. ಇಲ್ಲಿರುವ ಗುಡ್ಡ ಮತ್ತು ಗುಹೆಗಳಲ್ಲಿ ನೂರೆಂಟು ಶರಣರು ಲೋಕ ಕಲ್ಯಾಣಾರ್ಥವಾಗಿ ತಪಸ್ಸು ಮಾಡಿದ ಕುರುಹುಗಳು ದೊರೆತಿವೆ. ಶ್ರೀ ಗೋಸಲ ಸಿದ್ಧೇಶ್ವರರು ತಪಸ್ಸು ಮಾಡಿದ ಇಲ್ಲಿರುವ ಬೆಟ್ಟದಲ್ಲಿ ಶ್ರೀ ಸಿದ್ಧಲಿಂಗೇಶ್ವರ ದೇವಾಲಯ ಮತ್ತು ಮುಂಭಾಗದಲ್ಲಿ ಮಾತೆ ಸಿದ್ಧಗಂಗಮ್ಮನವರ ಮಂದಿರ ಮತ್ತು ತೀರ್ಥ ಖಂಡವಿದೆ.
ಗುರು ಪರಂಪರೆಯಲ್ಲಿ ಬಂದ ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀ ನಂಜುಂಡ ಸ್ವಾಮಿಗಳು, ಶ್ರೀ ರುದ್ರ ಸ್ವಾಮಿಗಳು, ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಉದ್ದಾನ ಸ್ವಾಮಿಗಳು, ಮುತ್ತಿನ ಸ್ವಾಮಿಗಳು, ಅಡವಿ ಸ್ವಾಮಿಗಳು ಕೆಲವು ಕಾಲ ಇದ್ದು, ಮೌನ ಅನುಷ್ಠಾನಗಳನ್ನು ಮಾಡಿ ಮಠಕ್ಕೆ ಬರುತ್ತಿದ್ದ ಭಕ್ತಾದಿಗಳಿಗೆ ಸಣ್ಣ ಪ್ರಮಾಣದಲ್ಲಿ ದಾಸೋಹ ಮುಂದುವರೆಸಿಕೊಂಡು ಬಂದಿದ್ದರು. ಶ್ರೀ ಉದ್ದಾನ ಸ್ವಾಮಿಗಳು ಅನ್ನ ದಾಸೋಹ ಜೊತೆಗೆ ೧೯೧೭ ರಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸಿ, ಜ್ಞಾನ ದಾಸೋಹ ಮತ್ತು ಸಾರ್ವಜನಿಕ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿದರು. ೧೯೩೮ ರಲ್ಲಿ ಸಂಸ್ಕೃತ ಕಾಲೇಜಾಗಿ ಪರಿವರ್ತನೆಗೊಂಡು ಇಂದು ರಾಷ್ಟ್ರದಲ್ಲಿ ಬೃಹತ್ ಸಂಸ್ಕೃತ ಸಂಸ್ಥೆ ಎಂಬ ಖ್ಯಾತಿ ಪಡೆಯುವಂತಾಗಿದೆ. ಶ್ರೀ ಮಠದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೆಲ್ಲರೂ ಸಂಸ್ಕೃತವನ್ನು ಅಧ್ಯಯನ ಮಾಡುವ ನಿಯಮವಿದೆ.

ಬೆಂಗಳೂರು ಜಿಲ್ಲಾ ಮಾಗಡಿ ತಾಲೂಕಿನ ವೀರಾಪುರ ಗ್ರಾಮದ ಶರಣರ ದಂಪತಿ ಹೊನ್ನಪ್ಪ ಮತ್ತು ಗಂಗಮ್ಮ ಅವರ ಪುತ್ರರಾದ ಶಿವಣ್ಣನವರನ್ನು (ಜನನ ೧.೦೪.೧೯೦೬) ಉದ್ಯಾನ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯಾಗಿ ಸ್ವೀಕರಿಸಿ, ದಿನಾಂಕ ೦೩-೦೩-೧೯೩೦ ರಂದು ಶಿವಕುಮಾರ ಸ್ವಾಮಿಗಳು ಎಂದು ನಾಮಕರಣ ಮಾಡಿ ವಿರಕ್ತಾಶ್ರಮ ದೀಕ್ಷೆ ಕೊಟ್ಟು, ಸಂಸ್ಥೆ ಮತ್ತು ಸಮಾಜ ಸೇವೆಗೆ ತರಬೇತಿ ಕೊಡುತ್ತ ಬಂದರು.
ಉದ್ದಾನ ಸ್ವಾಮಿಗಳು ದಿನಾಂಕ ೧೧-೦೧-೧೯೪೧ರಲ್ಲಿ ಲಿಂಗೈಕ್ಯರಾದರು. ನಂತರ ಶಿವಕುಮಾರ ಸ್ವಾಮಿಗಳು ಮಠದ ಅಧ್ಯಕ್ಷರಾಗಿ ಸಿದ್ಧಗಂಗಾ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಿದರು. ತ್ರಿಕಾಲ ಸ್ನಾನ, ಪೂಜೆಯೊಂದಿಗೆ ಯೋಗಾಸನ, ವ್ಯಾಯಾಮ, ಮೌನ, ಅನುಷ್ಠಾನಗಳು ನಿಯಮಿತವಾದ ಅತ್ಯಲ್ಪ ಪ್ರಸಾದವನ್ನು ತೆಗೆದುಕೊಂಡು ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದರು. ಪೂಜ್ಯರ ದಿನಚರಿಯೇ ಎಲ್ಲರಿಗೂ ಮಾರ್ಗದರ್ಶಿಯಾಗಿದೆ.
ಮಧ್ಯರಾತ್ರಿ ಎರಡೂವರೆಗೆ ಏಳುತ್ತಿದ್ದ ಶ್ರೀಗಳು, ಮೂರೂವರೆ ಗಂಟೆಗೆ ಪೂಜಾ ಗೃಹ ಪ್ರವೇಶಿಸಿ, ಏಕಾಂತ ಧ್ಯಾನ, ಜಪ, ತಪ, ಶರಣರ ವಚನಗಳು ಪಠಣ, ಭಕ್ತಿ ಗೀತೆಗಳು ಗಾಯನ ಮಾಡುತ್ತಿದ್ದರಲ್ಲದೆ, ಭಕ್ತರೊಂದಿಗೆ ಇಷ್ಟಲಿಂಗಾರ್ಚನೆ ಮಾಡಿಕೊಂಡು, ಬೇವಿನ ಕಷಾಯ ಸೇವಿಸಿ, ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ, ಅತಿಥಿಗಳ ಭೆಟ್ಟಿಯಾಗಿ ಕಚೇರಿಯ ಮುಂಭಾಗದಲ್ಲಿರುವ ಯಂತ್ರಧಾರಣ ಮಂಟಪಕ್ಕೆ ಆಗಮಿಸಿ, ಭಕ್ತರಿಗೆ ದರ್ಶನ ನೀಡುತ್ತಿದ್ದರು. ಮಧ್ಯಾಹ್ನ ಪ್ರಸಾದ ಸ್ವೀಕರಿಸಿ, ಕಚೇರಿ ಮತ್ತು ಮಠಕ್ಕೆ ಸಂಬಂಧಿಸಿದ ಹತ್ತಾರು ಕಾರ‍್ಯಗಳನ್ನು ಪರಿಶೀಲಿಸಿ ಸಂಬಂಧಿಸಿದ ವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಸಾಯಂಕಾಲ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ನೀತಿಕಥೆಗಳನ್ನು ಮತ್ತು ಶರಣರ ವಚನಗಳನ್ನು ಬೋಧಿಸುತ್ತಿದ್ದರು.
ಸಿದ್ಧಗಂಗಾ ಮಠದಡಿಯಲ್ಲಿ ೧೩೧ ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸಿತ್ತಿವೆ. ಈ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ಮತ್ತು ಸೇವೆಯನ್ನು ನೀಡುತ್ತಿವೆ. ಶ್ರೀ ಸಿದ್ಧಗಂಗಾ ಮಾಸಪತ್ರಿಕೆ ಕಳೆದ ೫೪ ವರ್ಷಗಳಿಂದ ಮಠದಿಂದ ಪ್ರಕಟವಾಗುತ್ತಿದೆ. ಪೂಜ್ಯರ ಶ್ರೀವಾಣಿ, ಮಹಾತ್ಮರ, ಶರಣರ ಪರಿಚಯಾತ್ಮಕ ಲೇಖನಗಳು, ವೈಜ್ಞಾನಿಕ ವಿಚಾರಗಳು, ಸವಿನುಡಿ, ಪರಿಸರದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತ ಮುನ್ನಡೆಯುತ್ತಿದೆ.
ಸಿದ್ಧಗಂಗಾ ಮಠದಿಂದ ಸಮಾಜಕ್ಕೆ ಉಪಯುಕ್ತವಾಗುವ ನೂರಾರು ಗ್ರಂಥಗಳು ಪ್ರಕಟವಾಗುತ್ತಿವೆ. ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ‍್ಯಶೈಲಿ ಎಲ್ಲರಲ್ಲಿ ಪ್ರೀತಿ, ವಿಶ್ವಾಸವನ್ನು ಮೂಡಿಸುತ್ತ ಬಂದಿದೆ.
ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗೆಗೆ ಹಲವಾರು ಗ್ರಂಥಗಳು, ಲೇಖನಗಳು, ಸಿಡಿಗಳು ಪ್ರಕಟವಾಗಿವೆ. ಅವರ ಶಿಸ್ತು, ಸಂಯಮ, ಜ್ಞಾಪಕಶಕ್ತಿ, ದೀರ್ಘಾಯುಷ್ಯ, ದೃಷ್ಟಿ ಲವಲವಿಕೆಯ ಚಲನಾಶಕ್ತಿ ಭಕ್ತರಲ್ಲಿ ಹೊಸ ಚೇತನ ನೀಡುತ್ತಿದೆ. ನಿಷ್ಠೆ, ಸೇವಾಕಾಂಕ್ಷೆ, ದೃಢನಿಶ್ಚಯ, ತೊಂದರೆಗಳನ್ನು ಎದುರಿಸುವ ಧೈರ್ಯ, ಪಾವಿತ್ರ್ಯ, ವಿಶಾಲ ದೃಷ್ಟಿ, ಸತ್ಯಪ್ರೇಮ, ಉನ್ನತ ಧ್ಯೇಯಗಳಿಂದ ಪೂಜ್ಯರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮೃದುವಾಗಿರಬೇಕು ಎನ್ನುತ್ತಿದ್ದ ಪೂಜ್ಯರು ಮಠಕ್ಕೆ ಭಕ್ತರೇ ಆಸ್ತಿ, ಈಶ್ವರ ಕೃಪೆಯೇ ಅಕ್ಷಯ ಪಾತ್ರೆ ಎಂದು ಹೇಳುತ್ತಿದ್ದರು.
ಡಾ. ಶಿವಕುಮಾರ ಸ್ವಾಮಿಗಳು ಪೀಠಕ್ಕೆ ಬಂದಾಗಿನಿಂದಲೂ ನುಡಿ ಮುತ್ತುಗಳ ಮೂಲಕ ಭಕ್ತರಿಗೆಲ್ಲ ಸ್ಫೂರ್ತಿ ತುಂಬುತ್ತಿದ್ದರು. ಅವರ ನುಡಿಗಳು “ಶ್ರೀವಾಣಿ” ಎಂದೇ ಚಿರಪರಿಚಿತವಾಗಿವೆ. ಮಠದಿಂದ ಪ್ರತಿವರ್ಷ ದಿನದರ್ಶಿ ಪ್ರಕಟವಾಗುತ್ತಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಶಿಕ್ಷಣ, ನೈತಿಕತೆ, ಬ್ರಹ್ಮಚರ್ಯೆ, ಆತ್ಮ ವಿಕಾಸ, ಮಾನವೀಯತೆ ಜೀವನ, ವ್ಯಕ್ತಿತ್ವ, ಸಮೃದ್ಧ ಜೀವನ ಹೃದಯವಂತಿಕೆ, ಮಾನವೀಯತೆ, ದೃಷ್ಟಿ, ಧರ್ಮ, ಬಾಳಿನ ಸಮಸ್ಯೆ, ಮಹಾತ್ಮರ ಜೀವನ ಮತ್ತು ಆದರ್ಶಗಳು, ನೀತಿ-ನಿಯಮ, ಕಾಯಕ ನಿಷ್ಠೆ, ಪೂಜೆ, ಪ್ರಸಾದ, ದುಡಿಮೆ, ಆಹಾರ, ಸಾಹಿತ್ಯ, ಸಂಸ್ಕೃತಿ, ವಚನಗಳು, ಸ್ವಾತಂತ್ರ್ಯ, ಗುಣ, ನಡತೆ, ದಾಸೋಹ, ಮಾತು, ಯೋಗಕ್ಷೇಮ, ಮಡಿ, ಭಕ್ತಿ, ವೈರಾಗ್ಯ, ಕೃಷಿ ಸ್ವಾತಂತ್ರ್ಯ, ಯೋಗಕ್ಷೇಮ, ಆಲಸ್ಯ, ಬಾಳಿನಗುಟ್ಟು, ಜೀವನ್ಮುಕ್ತಿ, ಅಧ್ಯಯನ, ಕಾವಿ, ಧ್ಯೇಯ ಧೋರಣೆಗಳು, ಭಕ್ತಿ, ವೈರಾಗ್ಯ ಮುಂತಾದ ವಿಷಯಗಳ ಮೇಲೆ ಪೂಜ್ಯರ ವಾಣಿಗಳನ್ನು ಭಕ್ತರು ಮೆಲುಕು ಹಾಕುತ್ತಾ, ತಮ್ಮ ಜೀವನದಲ್ಲಿ ಪರಿವರ್ತನೆ ತಂದುಕೊಂಡಿದ್ದಾರೆ. ಶ್ರೀವಾಣಿಗಳ ಪ್ರಭಾವ ಭಕ್ತರ ಜೀವನದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ, ಕ್ರಿಯಾಶೀಲವಾಗಿ ಕಾರ‍್ಯ ನಿರ್ವಹಿಸುವಂತೆ ಮಾಡುತ್ತಿವೆ.
ಸಿದ್ಧಗಂಗೆ ಹೋದವನು ಶಿಸ್ತು ಕಲಿಯುತ್ತಾನೆ, ಸಿದ್ಧಗಂಗೇಲಿ ಉಳಿದವರನ್ನು ಶಿವ ಕಾಯ್ತಾನೆ ಎನ್ನುವ ಉಕ್ತಿ ರೂಢಿಯಲ್ಲಿದೆ. ವಿದ್ಯಾರ್ಥಿಗಳಿಗೆ ಕಾಮಧೇನು ಕಲ್ಪವೃಕ್ಷವಾಗಿರುವ ಮಠ ವಿದ್ಯಾರ್ಥಿಗಳಿಗೆ ಉತ್ತಮ ಚಾರಿತ್ರ್ಯ, ಸಂಸ್ಕಾರ ನೀಡುವ ಕೇಂದ್ರವಾಗಿದೆ.
ಪೂಜ್ಯರಿಗೆ ತ್ರ‍್ರೀವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ, ಲೋಕದ ಜಂಗಮ, ಬಸವಶ್ರೀ, ಮಹಾತಪಸ್ವಿ, ಸಿದ್ಧಪುರುಷ ಮುಂತಾದ ೧೧೧ ಪ್ರಶಸ್ತಿಗಳು ಸಂದಿವೆ. ಪೂಜ್ಯರು ೧೧೧ ವರ್ಷ ಬಾಳಿ ಎಲ್ಲರಿಗೂ ದಾರಿ ದೀಪವಾಗಿದ್ದಾರೆ. ಪೂಜ್ಯರಿಗೆ ಬಂದಿರುವ ನೆನಪಿನ ಕಾಣಿಕಗಳನ್ನು ಬೃಹತ್ ಆದ ಮ್ಯೂಜಿಯಂನಲ್ಲಿ ಸಂಗ್ರಹಿಸಲಾಗಿದ್ದು, ಅದನ್ನು ನೋಡುವುದೇ ಒಂದು ಸೌಭಾಗ್ಯ. ದೇಶ, ವಿದೇಶಗಳಲ್ಲಿ ನೆಲಸಿರುವ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ತಮ್ಮ ಪರಿವಾರ ಸಮೇತ ಮಠಕ್ಕೆ ಪ್ರತಿವರ್ಷ ಬಂದು ಹೋಗುತ್ತಿರುವುದು ಇನ್ನೊಂದು ವೈಶಿಷ್ಟ್ಯ. ಸಮಾಜ ಮುಖಿ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಸಿದ್ದಗಂಗಾ ಮಠ ಗುರುತಿಸಿ, ಗೌರವಿಸಿ ಪ್ರೋತ್ಸಾಹಿಸುತ್ತಿದೆ.
ಮಠದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾಸೋಹ ಮತ್ತು ಸಾಯಂಕಾಲ ನಡೆಯುವ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ ಕೆಲವರಿಗೆ ಪವಾಡ ಎನಿಸಿದರೆ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸುತ್ತಿದೆ. ಮಠದಲ್ಲಿ ೧೨೪ ವಿವಿಧ ಜಾತಿ ಮತಗಳಿಗೆ ಸೇರಿದ ೧೦,೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಚಿತ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆಲ್ಲ ಪುಸ್ತಕ, ಬಟ್ಟೆ. ಶಾಲಾ ಕಾಲೇಜುಗಳ ಶುಲ್ಕ ಮುಂತಾದ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಸಾಗಿದೆ. ಸಕಲೇಶಪುರ, ಹಿಂದೂಪುರ, ನಾಗವಲ್ಲಿ, ಬೇಲೂರಗಳಿಲ್ಲಿಯೂ ಮಠದ ವಿದ್ಯಾರ್ಥಿ ನಿಲಯಗಳಿವೆ.
ಭಕ್ತರು ಮೂಲ ಮಠದಲ್ಲಿ ಪೂಜ್ಯರು ಮುಂಜಾನೆ ಮತ್ತು ಸಾಯಂಕಾಲ ಕುಳಿತು ಆಶೀರ್ವಾದ ಮಾಡುತ್ತಿದ್ದ ಸ್ಥಳಕ್ಕೆ ಮತ್ತು ಸಮಾಧಿಗೆ ಭೆಟ್ಟಿ ನೀಡಿ, ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾರೆ.
ಡಾ. ಶಿವಕುಮಾರ ಸ್ವಾಮಿಗಳು ಸೇವೆಗೆ ಹೊಸ ಭಾಷ್ಯ ಬರೆದು, ಸಮಾಜ ಕಲ್ಯಾಣವನ್ನೇ ಮಂತ್ರವಾಗಿರಿಸಿಕೊಂಡು ೨೧.೦೧.೨೦೧೯ ಶಿವಸಾಯುಜ್ಯ ಹೊಂದಿದರು. ಸ್ವಾಮಿಗಳಿಗೆ ಸ್ವಾಮೀಜಿಯಾಗಿ, ಭಕ್ತರಿಗೆ ಮತ್ತು ಶಿಷ್ಯರಿಗೆ ಗುರುಗಳಾಗಿ, ವಿದ್ಯಾರ್ಥಿಗಳ ಪಾಲಕರಾಗಿ, ಸಮಾಜದ ಶಾಂತಿದೂತರಾಗಿ ಸಿದ್ಧಗಂಗಾ ಮಠವನ್ನು ಧಾರ್ಮಿಕ, ದಾಸೋಹ ಮತ್ತು ಪುಣ್ಯ ಕ್ಷೇತ್ರವಾಗಿ ಬೆಳಿಸಿದರು. ಮಠಕ್ಕೆ ಪ್ರತಿದಿನ ಅಸಂಖ್ಯಾತ ಭಕ್ತರು, ಗಣ್ಯರು, ಪಾಲಕರು, ಪೋಷಕರು, ಹಿತೈಷಿಗಳು ರಾಜಕಾರಣಿಗಳು, ವಿಜ್ಞಾನಿಗಳು, ಜನಪ್ರತಿನಿಧಿಗಳು, ಲೇಖಕರು ಮತ್ತು ಬರಹಗಾರರು ದೇಶ, ವಿದೇಶಗಳಿಂದ ಬಂದು ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಿದ್ದಾರೆ. ಅವರ ಜೀವನವೇ ಸಮಾಜಕ್ಕೆ ಸಂದೇಶವಾಗಿದೆ.
ಪೂಜ್ಯರಾದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜೀವನ, ಆದರ್ಶಗಳನ್ನು, ಸಂದೇಶಗಳನ್ನು, ಪರಂಪರೆಯನ್ನು, ಕಾಯಕ, ದಾಸೋಹ ತತ್ವಗಳನ್ನು ಸಿದ್ಧಗಂಗಾ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮುಂದುವರೆಸಿದ್ದಾರೆ.
– ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement