ರತನ್ ಟಾಟಾಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಭಾರತ ರತ್ನ ಯಾರಿಗೆ ನೀಡಬೇಕೆಂದು ನಾವು ನಿರ್ಧರಿಸುತ್ತೇವೆಯೇ? ನೀವು ಹಿಂಪಡೆಯಿರಿ ಅಥವಾ ನಾವು ದಂಡ ವಿಧಿಸುತ್ತೇವೆ ಎಂದು ಪೀಠ ಹೇಳಿದೆ.
ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ನೇತೃತ್ವದ ಪೀಠ, ವ್ಯಕ್ತಿಯೊಬ್ಬರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನೀಡುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡುವುದಿಲ್ಲ ಎಂದು ಹೇಳಿದೆ.

ನಂತರ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಕೆ ದುಬೆ ಮನವಿಯನ್ನು ಹಿಂಪಡೆಯಲು ಮುಂದಾದರು.
ರತನ್ ಟಾಟಾ ಅವರು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲದೆ ತಮ್ಮ ಇಡೀ ಜೀವನವನ್ನು ರಾಷ್ಟ್ರದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಮತ್ತು ದೇಶಕ್ಕೆ ಅವರ ಕೊಡುಗೆಯನ್ನು ಕಡೆಗಣಿಸಲಾಗುವುದಿಲ್ಲ ಎಂದು ರಾಕೇಶ್ ಎಂಬವರು ಅರ್ಜಿ ಸಲ್ಲಿಸಿದ್ದರು.

ಚಿನ್ನದ ಚಮಚದೊಂದಿಗೆ ಜನಿಸಿದರೂ, ಟಾಟಾ ಅವರು ಆದರ್ಶಪ್ರಾಯ ಜೀವನವನ್ನು ನಡೆಸಿದರು ಎಂದು ಅರ್ಜಿ ಹೇಳಿದೆ. ಅವರು ಅತ್ಯುತ್ತಮ ನಾಯಕತ್ವದ ಕೌಶಲ್ಯ ಮತ್ತು ವ್ಯವಹಾರದ ಕುಶಾಗ್ರಮತಿಯನ್ನು ಹೊಂದಿದ್ದಾರೆ, ಇದು ಭಾರತ ಮತ್ತು ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ಪರಿಹಾರಕ್ಕಾಗಿ ಟಾಟಾ ಗ್ರೂಪ್ ಕಂಪನಿಗಳು ಸುಮಾರು ₹ 3,000 ಕೋಟಿ ದೇಣಿಗೆ ನೀಡಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
2000 ರಲ್ಲಿ ಟಾಟಾ ಅವರಿಗೆ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಮತ್ತು 2009 ರಲ್ಲಿ ಬ್ರಿಟನ್ನಿನ ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಸೇರಿದಂತೆ ಇತರ ಗಮನಾರ್ಹ ಮನ್ನಣೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಓದಿರಿ :-   ಜ್ಞಾನವಾಪಿ ಪ್ರಕರಣದಲ್ಲಿ ಮುಂದೇನು? ನಾಳೆ ವಾರಾಣಸಿ ಕೋರ್ಟ್ ತೀರ್ಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ