ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸಮಸ್ಯೆ ಬಗೆಹರಿಸಲು ಆಯೋಗ ರಚನೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ಸಂಬಂಧ ಉಂಟಾಗಿರುವ ಗೊಂದಲವನ್ನು ಸರಿಪಡಿಸಲು ರಾಜ್ಯ ಸರ್ಕಾರ ಆಯೋಗ ರಚಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಹಿಂದುಳಿದ ವರ್ಗದವರಿಗೆ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಸಂಬಂಧ ಆಯೋಗ ರಚಿಸಲು ಸಭೆಯು ಒಮ್ಮತದ ತೀರ್ಮಾನ ಕೈಗೊಂಡಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಇಂದು, ಗುರುವಾರ ಸರ್ವ ಪಕ್ಷಗಳ ಸಭೆಯಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಆಯೋಗ ರಚಿಸಿ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಬೇಕೆಂಬ ತೀರ್ಮಾನಕ್ಕೆ ಸಭೆ ಬಂದಿದೆ.ಆಯೋಗಕ್ಕೆ ಎಷ್ಟು ಕಾಲಾವಕಾಶ ನೀಡಬೇಕು, ಎಷ್ಟು ದಿನದಲ್ಲಿ ವರದಿ ನೀಡಬೇಕು, ಇದಕ್ಕೆ ಯಾರ್ಯಾರನ್ನೂ ನೇಮಿಸಬೇಕು ಸೇರಿದಂತೆ ಇತ್ಯಾದಿಗಳ ಕುರಿತು ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಹಿಂದುಳಿದವರ್ಗದವರಿಗೆ ಮೀಸಲಾತಿ ನೀಡದೆ ಚುನಾವಣೆಗೆ ಹೋಗಲು ಸರ್ಕಾರಕ್ಕೆ ಇಷ್ಟವಿಲ್ಲ. ಹೀಗಾಗಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ. ಆಯೋಗ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ನೀಡುವಂತಿಲ್ಲ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಇದನ್ನು ಮೀರಿ ಚುನಾವಣೆ ನಡೆಸಲು ಮುಂದಾಗದ್ದಕ್ಕೆ ನ್ಯಾಯಾಲಯ ರದ್ದುಪಡಿಸಿದೆ. ತಮಿಳುನಾಡು ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ಎಲ್ಲಾ ಸಾಧಕ-ಬಾಧಕಗಳನ್ನು ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ ಎಂದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50ರಷ್ಟು ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆಯೋಗದ ವರದಿ ಬಂದ ನಂತರ ಅಡ್ವೋಕೇಟ್ ಜನರಲ್ ಅವರು ಅಭಿಪ್ರಾಯವನ್ನು ನೀಡಬೇಕೆಂದು ಸೂಚಿಸಿದ್ದೇವೆ. ನಂತರ ಸುಪ್ರೀಂಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸಲಾಗುವುದು ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement