ಕರ್ನಾಟಕದ ಚುನಾವಣೆಯಲ್ಲಿ ಪಕ್ಷ 150ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಒಗ್ಗಟ್ಟಾಗಿ ಕೆಲಸ ಮಾಡಿ-ಕಾಂಗ್ರೆಸ್‌ ನಾಯಕರಿಗೆ ರಾಹುಲ್ ಗಾಂಧಿ ತಾಕೀತು

posted in: ರಾಜ್ಯ | 0

ಬೆಂಗಳೂರು: ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ತಲುಪಬೇಕು ಎಂದು ಎಐಸಿಸಿ ನಿಕಟ ಪೂರ್ವ ಅಧ್ಯಕ್ಷ ರಾಹುಲ್‍ ಗಾಂಧಿ ಕಾಂಗ್ರೆಸ್‌ ನಾಯಕರಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಮೊದಲಿನಿಂದಲೂ ಕಾಂಗ್ರೆಸ್ ರಾಜ್ಯವಾಗಿದೆ. ಈಗ ಇಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಾವು 150 ಸ್ಥಾನಗಳನ್ನು ಗಳಿಸುವ ಗುರಿಯಲ್ಲಿ ಸಾಗಬೇಕು. ಅದಕ್ಕಾಗಿ ಯಾವ ರೀತಿ ಜನರ ಬಳಿ ಹೋಗಬೇಕು. ಅವರ ಆಸೆ, ಅಗತ್ಯವನ್ನು ಅರಿಯುವ ಕಾರ್ಯ ಮಾಡಿ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ವ್ಯಕ್ತಿಯ ಹಿಂದಿನ ಇತಿಹಾಸ, ಪಕ್ಷ ನಿಷ್ಠೆ, ಅವರು ಮಾಡುತ್ತಿರುವ ಕೆಲಸ ಆಧರಿಸಿ ಚುನಾವಣೆಗೆ ಟಿಕೆಟ್ ನೀಡಲಾಗುವುದು. ಚುನಾವಣಾ ಹೋರಾಟ ಮತ್ತು ಅಭ್ಯರ್ಥಿಗಳ ಗೆಲುವು ಗುರಿಯಾಗಿರಬೇಕು. 150ಕ್ಕಿಂತ ಹೆಚ್ಚು ಸೀಟ್ ಗೆಲ್ಲಲೇ ಬೇಕು. ಇದಕ್ಕಾಗಿ ಯುವಕರನ್ನು ಪಕ್ಷಕ್ಕೆ ಕರೆತಂದು ತರಬೇತಿಗೊಳಿಸಬೇಕು ಎಂದು ಹೇಳಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‍ಟಿ, ಕೃಷಿ ಕಾನೂನುಗಳಿಂದ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ. ಸಣ್ಣ ವ್ಯಾಪಾರಿಗಳು ನಾಶವಾಗಿದ್ದಾರೆ.ಮೊದಲು ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಈಗ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಶೇ.40ರಷ್ಟು ಭ್ರಷ್ಟಾಚಾರವಿದೆ ಎಂದು ಗುತ್ತಿಗೆದಾರರು ನೇರವಾಗಿ ಪ್ರಧಾನಿ ಮೋದಿಯವರಿಗೇ ಪತ್ರ ಬರೆದಿದ್ದಾರೆ. ಹೀಗಾಗಿ ಪ್ರಧಾನಿ ಮೊದಿಯವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನ ನಗುತ್ತಾರೆ ಎಂದರು.

ಓದಿರಿ :-   ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ

ಪ್ರಧಾನಿ ಮೋದಿ ಜನಸಾಮಾನ್ಯರನ್ನು ಆರ್ಥಿಕವಾಗಿ ಸುಲಿಗೆ ಮಾಡಿ ಒಂದೆರಡು ಉದ್ಯಮಿಗಳನ್ನು ಉದ್ದಾರ ಮಾಡಿದ್ದಾರೆ. ಮತ ಕ್ರೋಢೀಕರಣಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸಮಾಜ ಜೋಡಿಸುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ರಾಜ್ಯದಲ್ಲಿ 70 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಕರ್ನಾಟಕದಲ್ಲಿ ಮತ್ತೆ ಬಲಯುತವಾದ ಹೊಸ ಹುಮ್ಮಸ್ಸಿನ ಹೊಸ ಕಾಂಗ್ರೆಸ್ ನೋಡಬೇಕಿದೆ. ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಿಗಿಂತ ಕಡಿಮೆಯಾಗಬಾರದು. ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು. ಇದು ಸಣ್ಣ ವಿಚಾರವಲ್ಲ. ಬಿಜೆಪಿಯ ಸುಳ್ಳನ್ನು ಜನರ ಮುಂದಿಡಬೇಕು. ರಾಜ್ಯ ಹಾಗೂ ರಾಷ್ಟ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಾಡಿದ ಸಾಧನೆ ದೊಡ್ಡದಿದೆ. ಇಂದು ನಾವು ಅದನ್ನು ಜನರಿಗೆ ತಿಳಿಸಬೇಕಿದೆ. ಎಲ್ಲರೂ ಒಟ್ಟಾದರೆ ಗೆಲ್ಲುವುದು ಕಷ್ಟವಲ್ಲ ಎಂದು ತಿಳಿಸಿದರು. ಹಲವರೊಂದಿಗೆ ರಾಹುಲ್‌ ಗಾಂಧಿ ವರ್ಚುವಲ್‌ ಮೂಲಕ ಸಮಾಲೋಚನೆ ನಡೆಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ