ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಚಿವ ಸೋಮಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ವಸತಿ ಸಚಿವ ವಿ. ಸೋಮಣ್ಣ ನಿರೀಕ್ಷಣಾ ಜಾಮೀನು ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿದೆ.
ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ಬಗ್ಗೆ ಬುಧವಾರ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ಶುಕ್ರವಾರ ಆದೇಶ ಪ್ರಕಟಿಸಿದರು.
ಆರೋಪಿ ಸೋಮಣ್ಣ ಅವರು ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಮನವಿ ಸಲ್ಲಿಸಿದ ದಿನದಂದೇ ಆಕ್ಷೇಪಣೆ ಸಲ್ಲಿಸುವುದಾಗಿ ಬೆಂಗಳೂರಿನ ಮೂಡಲಪಾಳ್ಯದ ದೂರುದಾರ ರಾಮಕೃಷ್ಣ ಅವರ ವಕೀಲ ಬಿ ಎನ್‌ ಜಗದೀಶ್‌ ಅವರು ಹೇಳಿರುವುದನ್ನು ದಾಖಲಿಸಿಕೊಂಡಿರುವುದಾಗಿ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ನ್ಯಾಯಾಲಯವು ಆರೋಪಿ ಸೋಮಣ್ಣ ಅವರ ವಿರುದ್ಧ ವಾರೆಂಟ್‌ ಜಾರಿ ಮಾಡಿಲ್ಲ. ಪ್ರಕರಣದಲ್ಲಿ ಪ್ರತಿವಾದಿಗಳಾಗಿರದ ಪೊಲೀಸರಿಗೆ ಒಂದೊಮ್ಮೆ ಸೋಮಣ್ಣ ಅವರನ್ನು ಬಂಧಿಸಿದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಂದು ನಿರ್ದೇಶಿಸಲಾಗದು ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ರಾಮಕೃಷ್ಣ ಅವರ ವಕೀಲ ಬಿ ಎನ್‌ ಜಗದೀಶ್‌ ಅವರು “ನ್ಯಾಯಾಲಯವು ಆರೋಪಿ ಸೋಮಣ್ಣ ಅವರಿಗೆ ವಾರೆಂಟ್‌ ಜಾರಿ ಮಾಡಿಲ್ಲ. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಸೋಮಣ್ಣ ಅವರು ಜಾಮೀನು ಕೋರಿ ಮನವಿ ಸಲ್ಲಿಸುವ ದಿನದಂದೇ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ದೂರುದಾರರ ಪರ ವಕೀಲರ ಈ ವಾದವನ್ನು ಒಪ್ಪಿರುವ ನ್ಯಾಯಾಲಯವು ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯನ್ನು ವಜಾ ಮಾಡಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮಹತ್ವದ ಆದೇಶ ಮಾಡಿತ್ತು. ಅಲ್ಲದೇ, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement