ತುಮಕೂರು: ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಏಪ್ರಿಲ್ 1ರ ದಿನವನ್ನು ದಾಸೋಹ ದಿನವೆಂದು ಘೋಷಿಸಲಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಬಿಸಿಯೂಟ ಯೋಜನೆ ಎಂದು ಹೆಸರಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿರುವ ‘ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದವರು ಶ್ರೀಗಳು. ಇದೊಂದು ದೈವ ಶಕ್ತಿ, ಶ್ರೀಗಳ ಧ್ಯೇಯ, ಶ್ರದ್ಧೆ, ನಿಷ್ಠೆ, ಪರಿಶ್ರಮವನ್ನು ನಾವು ಪರಿಪಾಲನೆ ಮಾಡಬೇಕು. ಶ್ರೀಗಳಿಗೆ ಜಾತಿ ಭೇದ ಇರಲಿಲ್ಲ. ಸರ್ವೋದಯ ಪರಿಕಲ್ಪನೆ ಈ ಮಠದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ್ ಸ್ವಾಮೀಜಿ ಹೆಸರಿಡಲಾಗುವುದು ಎಂದು ವೇದಿಕೆ ಮೇಲೆಯೇ ಘೋಷಿಸಿದರು.
ಈ ನೆಲದಲ್ಲಿ ಪ್ರೇರಣೆದಾಯಕ ಶಕ್ತಿಯಿದೆ. ಶಿವಕುಮಾರ್ ಶ್ರೀಗಳ ಪರಂಪರೆಯನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. 88 ವರ್ಷ ಈ ನಾಡಿಗೆ ಸಿದ್ದಗಂಗಾ ಶ್ರೀಗಳು ಸೇವೆ ಸಲ್ಲಿಸಿದ್ದಾರೆ. ಇಡೀ ದೇಶದಲ್ಲಿ ಯಾರೂ ಈ ಸೇವೆ ಮಾಡಿರಲಿಲ್ಲ. ಅದಕ್ಕಾಗಿಯೇ ಅವರನ್ನು ನಡೆದಾಡುವ ದೇವರು ಎನ್ನುತ್ತೇವೆ. ಅನ್ನ, ಅಕ್ಷರ, ಆಶ್ರಯ ಎಂಬ ತತ್ವ ಪಾಲಿಸಿದವರು ಸಿದ್ದಗಂಗಾ ಶ್ರೀಗಳು ಎಂದು ಸ್ಮರಿಸಿದರು.
ಸ್ವಾಗತ ಭಾಷಣ ಮಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ