ಶ್ರೀಲಂಕಾದಲ್ಲಿ ವಾಟ್ಸಾಪ್, ಫೇಸ್‌ಬುಕ್ ಟ್ವಿಟರ್ ಬಳಕೆಗೆ ನಿರ್ಬಂಧ

ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಧಿಕಾರಿಗಳು ವಾರಾಂತ್ಯದಲ್ಲಿ ದೇಶದಾದ್ಯಂತ ಕರ್ಫ್ಯೂ ವಿಧಿಸಿದ ನಂತರ, ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ಬಂಧ ವಿಧಿಸಿರುವುದಾಗಿ ವರದಿಯಾಗಿದೆ.
ಶ್ರೀಲಂಕಾ ದೇಶದಾದ್ಯಂತ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ವೇದಿಕೆಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಲಂಡನ್ ಮೂಲದ ನೆಟ್‌ಬ್ಲಾಕ್ಸ್ ತಿಳಿಸಿದೆ.

ಆಹಾರ, ಇಂಧನ ಮತ್ತು ಔಷಧಗಳ ಕೊರತೆಯಿಂದ ಬೇಸತ್ತಿರುವ ಜನರು ಸರ್ಕಾರದ ವಿರುದ್ಧ ಯೋಜಿತ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದ್ದಾರೆ. ಅದನ್ನು ತಡೆಯಲು ಶ್ರೀಲಂಕಾದ ಪೊಲೀಸರು ಶನಿವಾರ 36 ಗಂಟೆಗಳ ಕರ್ಫ್ಯೂ ಘೋಷಿಸಿದ್ದರು.

ಶನಿವಾರ ಸಂಜೆಯಿಂದ ಕರ್ಫ್ಯೂ ಜಾರಿಗೆ ಬಂದಿದ್ದು, ಸೋಮವಾರ ಬೆಳಿಗ್ಗೆ ಹಿಂತೆಗೆದುಕೊಳ್ಳಲಾಗುವುದು ಎಂದು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ಒಂದು ದಿನದ ನಂತರ ಪೊಲೀಸರು ತಿಳಿಸಿದ್ದಾರೆ.
ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆದಿತ್ತು. ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಸರ್ಕಾರ ಭಯೋತ್ಪಾದಕರು ಎಂದು ಕರೆದಿತ್ತು. ಅಧ್ಯಕ್ಷರ ನಿವಾಸದ ಮುಂದಿನ ಪ್ರತಿಭಟನೆ ವೇಳೆ ಉದ್ರಿಕ್ತ ಜನರು ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement