ಬೆಂಗಳೂರು: ಆಜಾನ್ ಕುರಿತು ಸರ್ಕಾರ ಹೊಸ ಕಾನೂನು ತಂದಿಲ್ಲ, ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಒಂದೇ ಎಂದರು.
ಇವೆಲ್ಲಾ ಹೊಸ ವಿಚಾರಗಳೇನೂ ಅಲ್ಲ, ಹಲವಾರು ವರ್ಷಗಳಿಂದ ಇವೆ. ಕೆಲವು ಆದೇಶಗಳು 2001, 2002, ಹೈಕೋರ್ಟ್ ತೀರ್ಪು ಆಧಾರದ ಮೇಲೆ ಮಾಡಿದ್ದೇವೆ. ಇಂದಿನ ಬಿಜೆಪಿ ಸರ್ಕಾರ ಹೊಸ ಆದೇಶವನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
advertisement
9535127775 / 9901837775 / 6364528715 / 08362775155 / https://icsmpucollege.com/
ಧರ್ಮವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜವಾಗಲಿ, ಯಾವುದೇ ಸಂಘಟನೆಯಾಗಲಿ ಕಾನೂನು ಕೈಗೆತ್ತಿಕೊಂಡರೆ ಕಾನೂನು ಸುವ್ಯವಸ್ಥೆ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಎಷ್ಟು ಡೆಸಿಮಲ್ ವರೆಗೆ ಬಳಸಬೇಕು ಎಂಬ ಬಗ್ಗೆ ಹಿಂದಿನ ಆದೇಶವಿದ್ದು, ಅದನ್ನು ಹಂತಹಂತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ನನಗೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರಿಂದ ಸೂಚನೆ ಬಂದಿಲ್ಲ. ದೆಹಲಿಗೆ ಹೋದಾಗ ನಾಳೆ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದು, ಆಗ ಸೂಚನೆ ನೀಡಬಹುದು ಎಂಬ ನಿರೀಕ್ಷೆಯಿದೆ ಎಂದರು.
ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣಿಸಲಿದ್ದು ಸಾಯಂಕಾಲ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಅವರ ಜೊತೆ ಮೇಕೆದಾಟು, ಮಹದಾಯಿ ಯೋಜನೆಗಳ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಸೇರಿದಂತೆ ಹಲವು ಜಲ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಆಡಳಿತಾತ್ಮಕ, ತಾಂತ್ರಿಕವಾಗಿರುವ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಒತ್ತಾಯ ಮಾಡಲಿದ್ದೇನೆ ಎಂದರು.
ನಾಳೆ ಬೆಳಗ್ಗೆ ಜಿಎಸ್ ಟಿ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಸೈನಿಕ ಶಾಲೆಗೆ ಸೇರ್ಪಡೆ ಮಾಡುವ ಬಗ್ಗೆ ರಕ್ಷಣಾ ಸಚಿವರ ಜೊತೆ ಭೇಟಿ ಮಾಡಲಿದ್ದೇನೆ. ಕೇಂದ್ರ ಇಂಧನ ಖಾತೆ ಸಚಿವರನ್ನು ಕೂಡ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ