ಪದವಿ ಹಂತದಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀwiದೆ. ಕನ್ನಡ ಕಡ್ಡಾಯವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಬಾರ್‌ ಅಂಡ್‌ ಬೆಂಚ್‌ ವರದಿ ಪ್ರಕಾರ, ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯನ್ನು ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕು ಎಂದು ಕೋರಿ ಶಿವಕುಮಾರ್‌ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

2021ರ ಡಿಸೆಂಬರ್‌ 16ರಂದು ಮುಂದಿನ ವಿಚಾರಣೆಯ ವರೆಗೆ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಾಯಪೂರ್ವಕ ಕ್ರಮ ಅನುಸರಿಸದಂತೆ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ಆದೇಶಿಸಿದ್ದ ಪೀಠವು, ಕೇಂದ್ರ ಸರ್ಕಾರಕ್ಕೆ ತನ್ನ ನಿಲುವು ಸ್ಪಷ್ಡಪಡಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜನವರಿ 22ರಂದು ಅಫಿಡವಿಟ್‌ ಸಲ್ಲಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಾಗ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಲಾಗದು ಎಂದು ಹೇಳಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಪಟ್ಟಣದ ಹೆಸರು ಬದಲಾವಣೆಗೆ ಸಚಿವ ಸಂಪುಟ ಅನುಮೋದನೆ

ಈಗ ಉನ್ನತ ಶಿಕ್ಷಣ ಇಲಾಖೆಯು 2021ರ ಆಗಸ್ಟ್‌ 7ರಂದು ಹೊರಡಿಸಿರುವ ಆದೇಶ ಮತ್ತು ಅದನ್ನು ವಿಸ್ತರಿಸಿ ಸೆಪ್ಟೆಂಬರ್‌ 15ರಂದು ರಾಜ್ಯ ಸರ್ಕಾರ ಮಾಡಿರುವ ಆದೇಶಗಳಿಗೆ ಮುಂದಿನ ಆದೇಶದ ವರೆಗೆ ಹೈಕೋರ್ಟ್‌ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ಎನ್‌ಇಪಿ ಅಡಿ ಯಾವುದೇ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಬಹುದೇ ಅಥವಾ ಇಲ್ಲವೇ ಎಂಬ ಏಕೈಕ ಕಾನೂನಿನ ಪ್ರಶ್ನೆ ನಮ್ಮ ಮುಂದಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಕರಣದಲ್ಲಿ ಮಧ್ಯಪ್ರವೇಶಿಕೆ ಕೋರಿರುವುದಕ್ಕೆ ಸಂಬಂಧಿಸಿದಂತೆ ವಕೀಲ ಶ್ರೀಧರ್‌ ಪ್ರಭು ಅವರಿಗೆ ಆಕ್ಷೇಪಣೆ ಸಲ್ಲಿಸಲು ಪೀಠವು ಮೌಖಿಕವಾಗಿ ಸೂಚಿಸಿತು. ಅಂತಿಮ ವಿಚಾರಣೆಯನ್ನು ಜುಲೈ ಕೊನೆಯ ವಾರಕ್ಕೆ ಮುಂದೂಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement