ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹಿಂಪಡೆದ ಅಧ್ಯಕ್ಷ ರಾಜಪಕ್ಸೆ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಸರ್ಕಾರದ ವಿರುದ್ಧ ದಂಗೆ ಎದ್ದ ನಂತರ ಶ್ರೀಲಂಕಾದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರು ತುರ್ತು ಪರಿಸ್ಥಿತಿ ಹಿಂಪಡೆದು ಆದೇಶ ಹೊರಡಿಸಿದ್ದಾರೆ. ಆದರೆ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಆಡಳಿತ ಪಕ್ಷದವರು ತಿಳಿಸಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾದಂತೆ ಜನ ಮೂಲಭೂತ ಅಗತ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ, ಈ ಸ್ಥಿತಿಗೆ ಅಧ್ಯಕ್ಷ ರಾಜಪಕ್ಸೆ ಅವರೇ ಕಾರಣ ಎಂದು ಆರೋಪಿಸಿ ಜನ ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಿಸಲು ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆ ಮೂಲಕ ಪ್ರತಿಭಟನಾಕಾರರನ್ನು ಬಂಧಿಸುವ, ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರ ಅಧ್ಯಕ್ಷರಿಗೆ ನೀಡಲಾಗಿತ್ತು.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ದೊಡ್ಡ ರಾಜಕೀಯ ಪಲ್ಲಟ ಮಾಡುತ್ತಿದೆ. ರಾಜಕೀಯದಲ್ಲಿಯೂ ಬದಲಾವಣೆಯಾಗುತ್ತಿದೆ. ಆಡಳಿತ ಮೈತ್ರಿಕೂಟದ ಹನ್ನೊಂದು ಪಕ್ಷಗಳ ಸಂಸದರು ತಾವು ಸ್ವತಂತ್ರರಾಗಿ ಕಾರ್ಯ ನಿರ್ವಹಿಸುವುದಾಗಿ ಹಾಗೂ ಮಂತ್ರಿಕೂಟದಿಂದ ಹೊರಹೋಗುವುದಾಗಿ ಮಂಗಳವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ನಲವತ್ತಕ್ಕಿಂತ ಹೆಚ್ಚು ಸಂಸದರು ಸರ್ಕಾರದಿಂದ ಹೊರಹೋಗುವಾಗಿ ಹೇಳಿದ್ದರಿಂದ ಸರ್ಕಾರ ಅಸ್ಥಿರವಾಗಿದೆ. ರಾಜಪಕ್ಸೆ ಅವರ ಪಕ್ಷದ ಸಂಸದರು ಕೂಡಾ ಅಧ್ಯಕ್ಷರಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಅಲ್ಲದೆ ಸಂಪುಟದ ಸಚಿವರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಲಂಕಾ ಸರ್ಕಾರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement