ನನಗೆ ಅಧಿಕಾರ ಕೊಟ್ಟಿದ್ದು ಶಿಕ್ಷಕ ಸಮುದಾಯ, ಅವರಿಗೆಂದೂ ಅನ್ಯಾಯ ಮಾಡಲು ಬಿಡುವುದಿಲ್ಲ: ಸಭಾಪತಿ ಹೊರಟ್ಟಿ

ಧಾರವಾಡ : ಕಳೆದ ನಲವತ್ತೆರಡು ವರ್ಷಗಳ ಹಿಂದೆ ಶಿಕ್ಷಕ ಸಮುದಾಯ ನನ್ನ ಕೈಗೆ ಅಧಿಕಾರವನ್ನು ಕೊಟ್ಟರು. ಅಂದಿನಿಂದ ಇಂದಿನ ವರೆಗೂ ನನಗೆ ಅಧಿಕಾರ ಕೊಟ್ಟ ಶಿಕ್ಷಕ ಸಮುದಾಯದವರಿಗೆ ನಾನೆಂದೂ ಕೈಕೊಟ್ಟಿಲ್ಲ, ಅನ್ಯಾಯ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿಯ ಜನತಾ ಶಿಕ್ಷಣ ಸಮಿತಿಯ (ಜೆ.ಎಸ್.ಎಸ್) ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಯಾವತ್ತಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಅವರೊಂದಿಗೆ ನ್ಯಾಯಯುತವಾಗಿ ನಡೆದುಕೊಂಡಿದ್ದೇನೆ. ಇದುವೇ ಸತತ ಏಳು ಬಾರಿ ನಾನು ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗಲು ಕಾರಣ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿಯೂ ಶಿಕ್ಷಕರು ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಈಗ ಒಂದರಿಂದ ಮೂರನೆಯ ತಲೆಮಾರಿನ ಶಿಕ್ಷಕರು ನಮ್ಮ ಮಧ್ಯದಲ್ಲಿದ್ದಾರೆ. ಅವರಿಗೂ ಕೂಡ ನನ್ನ ಕಾರ್ಯಗಳ ಮೇಲೆ ನಂಬಿಕೆಯಿದೆ ಎಂದು ನನಗೆ ನಂಬಿಕೆಯಿದೆ ಎಂದು ಹೇಳಿದರು.
ಪ್ರಾರಂಭದಿಂದ ಇಲ್ಲಿಯವರೆಗೆ ನಡೆದು ಬಂದ ಹೆಜ್ಜೆಯ ಗುರುತುಗಳನ್ನು ಸ್ಮರಿಸಿಕೊಂಡು, ಶಿಕ್ಷಕ ಸಮುದಾಯಕ್ಕೆ ಬರುವ ಸಂಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ತಮ್ಮದಾಗಿದ್ದು, ಅಧಿಕಾರ ಸಿಕ್ಕಾಗ “ಪರೋಪಕಾರಾಥಂ ಇದಂ ಶರೀರಂ” ಎಂಬ ಮಾತಿನಂತೆ ಕೈಲಾದ ಮಟ್ಟಿಗೆ ಸಹಾಯ, ಸಹಕಾರವನ್ನು ನೀಡುತ್ತೇನೆ. ಸಮಾಜದ ಹಾಗೂ ಶಿಕ್ಷಕ ಸಮುದಾಯದ ಋಣ ತೀರಿಸುತ್ತೇನೆ ಎಂದು ಹೇಳಿದರು.

ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಬಗ್ಗೆ ತಮಗಿರುವ ಪ್ರೀತಿ ಅಭಿಮಾನದ ಬಗ್ಗೆ ಮಾತನಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ಬಾಮೀಜಿ ಮಾತನಾಡಿ, ಕಾಯಕದಲ್ಲಿ ನಿರತರಾದವರಿಗೆ ಅನ್ಯರ ಹಂಗಿನ ಅಗತ್ಯವಿಲ್ಲ. ಬಸವಣ್ಣನವರು ಹೇಳಿದ ಹಾಗೆ ಮಾಡಿದೆನೆಂಬುದು ಮನದಲ್ಲಿ ಸುಳಿದರೆ “ಏಡಿಸಿ ಕಾಡಿತ್ತು ಶಿವನ ಡಂಗುರ ಎಂಬಂತೆ” ಎಷ್ಟೆಲ್ಲ ಕೆಲಸ ಕಾರ್ಯಗಳನ್ನು ಮಾಡಿರುವ ಹೊರಟ್ಟಿಯವರು ತಾವು ಮಾಡಿದ್ದನ್ನು ಹೇಳಿಕೊಳ್ಳುವವರಲ್ಲ. ನಿಷ್ಠೆ ಪ್ರಾಮಾಣಿಕತೆಯಿಂದ ಅವರು ಕಾರ್ಯ ನಿರ್ವಹಿಸಿದ್ದರ ಫಲವಾಗಿ ಅವರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶಗಳು ಅವರಿಗೆ ದೊರೆತಿವೆ. ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹರಸಿದರು.

ಹೊರಟ್ಟಿಯವರ ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ಡಾ. ವೆಂಕಟ ನರಸಿಂಹ ಜೋಶಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ ವಜ್ರಕುಮಾರ ಹೊರಟ್ಟಿಯವರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ನಡುವಿನ ಒಡನಾಟದ ಬಗ್ಗೆ ಹಾಗೂ ಜನತಾ ಶಿಕ್ಷಣ ಸಮಿತಿಗೂ ಇರುವ ಅವಿನಾಭಾವ ಸಂಬಂಧವನ್ನು ಕುರಿತು ಮಾತನಾಡಿದರು.
ಜನತಾ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ, ಬೆಳಗಿಸುವಲ್ಲಿ ಬಸವರಾಜ ಹೊರಟ್ಟಿ ಅವರ ಪಾತ್ರವೂ ಪ್ರಮುಖವಾದದ್ದು. ನಾವು ಮಾಡುತ್ತಿರುವ ಈ ಸನ್ಮಾನವನ್ನು ಅವರು ಸಭಾಪತಿಗಳಾದಗಲೇ ಮಾಡಬೇಕಿತ್ತು. ಕೊರೊನಾ ಹಾಗೂ ಇನ್ನುಳಿದ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ನಾವು ಮಾಡಿದ ಪಕ್ಷಾತೀತ ಸನ್ಮಾನ ಹೊರಟ್ಟಿ ಅವರ ವ್ಯಕ್ತಿತ್ವಕ್ಕೆ ನೀಡಿದ ಸನ್ಮಾನ. ಅವರ ನಿಷ್ಠೆ ಪ್ರಾಮಾಣಿಕತೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಅವರನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತದೆ ಎಂದು ಹೇಳಿದರು.
ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ ಅಜಿತ ಪ್ರಸಾದರವರು ಸನ್ಮಾನ ಪತ್ರ ವಾಚಿಸಿದರು. ಹೇಮಲತಾ ಹೊರಟ್ಟಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಚನ್ನುಡಿಯ ಭಾಗ ಐದನ್ನು ಬಿಡುಗಡೆ ಮಾಡಿದರು ವೇದಿಕೆಯ ಮೇಲೆ ಸುಮನಾ ವಜ್ರಕುಮಾರ, ಕಮಲ್ ಮೆಹ್ತಾ, ಸುಧೀರ ಕುಸನಾಳೆ ಉಪಸ್ಥಿತರಿದ್ದರು. ಮಹಾವೀರ ಉಪಾಧ್ಯೆ ಸ್ವಾಗತಿಸಿದರು, ಡಾ. ಸೂರಜ್ ಜೈನ್ ವಂದಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಜಿನದತ್ ಹಡಗಲಿ ನಿರೂಪಿಸಿದರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement