ಪಾಟ್ನಾ: 60 ಅಡಿ ಉದ್ದದ ಸೇತುವೆಯನ್ನೇ ಕಳ್ಳತನ ಮಾಡಿದ ಅಪರೂಪದ ಪ್ರಕರಣವೊಂದು ಬಿಹಾರದ ರೊಹತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯಾವಾರ್ ಎಂಬಲ್ಲಿ ನಡೆದಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ 60 ಅಡಿ ಉದ್ದದ 500 ಟನ್ ಕಬ್ಬಿಣದ ಸೇತುವೆಯನ್ನು ಸರ್ಕಾರಿ ಅಧಿಕಾರಿಗಳಂತೆ ತೋರಿಸಿಕೊಂಡು ಕಳ್ಳರು ಕದ್ದಿದ್ದಾರೆ. ಜಲಸಂಪನ್ಮೂಲ ಇಲಾಖೆ ಏಪ್ರಿಲ್ 8 ರಂದು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದೆ.
50 ವರ್ಷ ಹಳೆಯದಾದ 60 ಅಡಿ ಉದ್ದದ ಇಡೀ ಸೇತುವೆಯನ್ನು ಹಾಡಹಗಲೇ ನೆಲಸಮ ಮಾಡಿ ಅಲ್ಲಿದ್ದ ಕಬ್ಬಿಣವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಕಳ್ಳಚ ಚಾಕಚಕ್ಯತೆಗೆ ಗ್ರಾಮಸ್ಥರು ಮತ್ತು ಆಡಳಿತ ವರ್ಗವೇ ಬೆಚ್ಚಿಬಿದ್ದಿದೆ.
ಈ ಖತರನಾಕ್ ಕಳ್ಳರು ತಮ್ಮನ್ನು ನೀರಾವರಿ ಇಲಾಖೆ ಅಧಿಕಾರಿಗಳು ಎಂದು ಹೇಳಿಕೊಂಡು ಜನರನ್ನು ನಂಬಿಸಿ ಸೇತುವೆಯ ಮರು ನಿರ್ಮಾಣ ಮಾಡಬೇಕೆಂದು ಯಾಮಾರಿಸಿ ಇಡೀ ಸೇತುವೆಯನ್ನು ಕೆಡವಿ ಕಬ್ಬಿಣವನ್ನು ದೋಚಿಕೊಂಡು ಹೋಗಿದ್ದಾರೆ.
ಚಿಕ್ಕ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ಸೇತುವೆಯನ್ನು ಹಲವು ವರ್ಷಗಳಿಂದ ಯಾರ ಬಳಸುತ್ತಿರಲಿಲ್ಲ. 50 ವರ್ಷಗಳ ಹಿಂದಿನ ಈ ಸೇತುವೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಾಲಕ್ರಮೇಣ ಶಿಥಿಲವಾಗಿದ್ದರಿಂದ ಪರ್ಯಾಯವಾಗಿ ಇನ್ನೊಂದು ಸೇತುವೆ ನಿರ್ಮಾಣ ಮಾಡಿದ್ದರಿಂದ ಇದರ ಬಳಕೆ ಬಹುತೇಕ ನಿಂತುಹೋಗಿತ್ತು. ಹೀಗಾಗಿ ಈ ಸೇತುವೆ ತೆರವಿಗೆ ಜನರು ಕೂಡ ಅರ್ಜಿ ಬರೆದಿದ್ದರು.
ಇದು ಗೊತ್ತಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳರು ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳು ಸೇತುವೆ ಹಳತಾದ ಮತ್ತು ಶಿಥಿಲಗೊಂಡಿದ್ದರಿಂದ ಅದನ್ನು ಕೆಡಹುವ ಕಾರ್ಯದಲ್ಲಿ ತೊಡಗಿರುವಂತೆ ಜನರಿಗೆ ಬಿಂಬಿಸಿ ಹಲವು ದಿನಗಳ ಕಾಲ ಕಬ್ಬಿಣದ ಸೇತುವೆಯ ಭಾಗಗಳನ್ನು ಕಿತ್ತು ಹಾಕಿದ್ದಾರೆ. ಅದರಲ್ಲಿದ್ದ ಕಬ್ಬಿಣವನ್ನು ಕದ್ದೊಯ್ದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಬ್ಬಿಣವನ್ನು ಹಲವು ದಿನಗಳ ವರೆಗೆ ಕಾಲ ಸಾಗಣೆ ಮಾಡಿದ್ದಾರೆ. ಆದರೂ ಜನರಿಗೆ ಅವರ ಬಗ್ಗೆ ಸಂಶಯ ಬಂದಿಲ್ಲ..!
ಇದು ಕೆಲದಿನಗಳ ಕಾಲ ನಡೆಯುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿರಲೇ ಇಲ್ಲ. 60 ಅಡಿ ಉದ್ದದ ಸೇತುವೆಯನ್ನು ಜೆಸಿಬಿ ಗ್ಯಾಸ್‍ಕಟ್ಟರ್ ಮೂಲಕ ಕೆಡವಿದ್ದಾರೆ. ಸೇತುವೆಯ ಎಲ್ಲ ಅವಶೇಷಗಳನ್ನೂ ಕದ್ದು ಹೋಗುತ್ತಿದ್ದಾಗ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಂಶಯಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆಗ ಅಧಿಕಾರಿಗಳು ಸೇತುವೆ ಒಡೆದು ಹಾಕುವ ಬಗ್ಗೆ ಯಾವುದೇ ಯೋಜನೆಯನ್ನು ನಾವು ರೂಪಿಸಿಲ್ಲ ಎಂದು ಹೇಳಿದಾಗಲೇ ಜನರಿಗೆ ಸತ್ಯ ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ