ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.
ಈ ಸಂಬಂಧ ಇಂದು, ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ಈಶ್ವರಪ್ಪ ನಾಳೆ, ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಂತರ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. ನನಗೆ ದೇವರ ಮೇಲೆ ನಂಬಿಕೆ ಇದೆ. ಈ ಪ್ರಕರಣದಿಂದ ನಾನು ಕಳಂಕರಹಿತವಾಗಿ ಹೊರಬಂದೇ ಬರುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ನನ್ನಿಂದ ಒಂದೇ ಒಂದು ತಪ್ಪಿದ್ದರೆ ಅದಕ್ಕೆ ಆ ಭಗವಂತನಲ್ಲಿ ನನಗೆ ಶಿಕ್ಷೆ ಕೊಡು ಎಂದು ನಾನು ಬೇಡಿಕೊಳ್ಳುತ್ತೇನೆ. ನಾನು ನಮ್ಮ ಇಲಾಖೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದೆ. ಅದರಲ್ಲೂ ಮನೆಮನೆಗೆ ಗಂಗೆ ಎಂಬ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕೆಲ್ಲಾ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.

ರಾಜೀನಾಮೆ ಬಗ್ಗೆ ನಾನು ಮೂರು ದಿನದ ಹಿಂದೆಯೇ ತೀರ್ಮಾನ ಮಾಡಿದ್ದೆ. ಆದರೆ ಇದರಿಂದ ಸರ್ಕಾರಕ್ಕೆ ಇರುಸುಮುರುಸು ಆಗಬಾರದು ಎಂದು ಈ ತೀರ್ಮಾನಕ್ಕೆ ಬಂದೆ ಹೇಳಿದರು.
ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಬಲಿಪಶು ಆಗುವವನಲ್ಲ. ದೇವರನ್ನು ನಂಬಿದ್ದೇನೆ, ಈ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಲಿ, ತನಿಖೆ ಆದ ನಂತರ ಅದರಿಂದ ಹೊರಬರುವೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

ಗುತ್ತಿಗೆದಾರ ಸಂತೋಷ ಪಾಟೀಲ ಅವರಿಗೆ ಬಿಲ್ ಹಣ ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತರು 40% ಕಮೀಷನ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಅವರು ಈ ಹಿಂದೆ ಆರೋಪಿಸಿದ್ದರು.ಈ ಸಂಬಂಧ ಸಂತೋಷ ಅವರು ಪ್ರಧಾನಿ ಮೋದಿಗೂ ಪತ್ರ ಬರೆದಿದ್ದರು. ಸಚಿವ ಈಶ್ವರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದರೂ ಪ್ರಯೋಜನ ಆಗಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ನಂತರ ಸಚಿವ ಈಶ್ವರಪ್ಪ ಈ ಆರೋಪಗಳ ವಿರುದ್ಧ ಸಂತೋಷ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಆದರೆ ಏಪ್ರಿಲ್ 11ರ ಸೋಮವಾರ ರಾತ್ರಿ ಬೆಳಗಾವಿಯ ಸಂತೋಷ ಅವರು ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಹೇಳಿ ವಾಟ್ಸಪ್‌ ಸಂದೇಶ ಕಳುಹಿಸಿ ಉಡುಪಿ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಈಶ್ವರಪ್ಪ ಹಾಗೂ ಅವರ ಇಬ್ಬರು ಆಪ್ತ ಸಹಾಯಕರ ವಿರುದ್ಧ ಉಡುಪಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.
ಗುರವಾರ ಬೆಳಿಗ್ಗೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತು. ಈ ಸಂಬಂಧ ಸಿದ್ದರಾಮಯ್ಯ, ಡಿ.ಕೆ.ಶಿವಕಮಾರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಪ್ರಯತ್ನಿಸಿತ್ತು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement