ಉತ್ತರ ಕನ್ನಡ ಜಿಲ್ಲೆಯ ಇ ಸ್ವತ್ತು ಸಮಸ್ಯೆಗೆ ತಿಂಗಳೊಳಗೆ ಮುಕ್ತಿ: ಕಂದಾಯ ಸಚಿವ ಅಶೋಕ ಭರವಸೆ

ಅಚವೆ (ಅಂಕೋಲಾ) : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಭೀರವಾಗಿರುವ ಇ ಸ್ವತ್ತು ಸಮಸ್ಯೆ ಬಗೆಹರಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಜಿಲ್ಲೆಯ ಈ ಸಮಸೆಯನ್ನ ಉಪಸಮಿತಿ ಮುಂದಿಟ್ಟು ಒಂದು ತಿಂಗಳಲ್ಲಿ ಈ ಸಮಸ್ಯೆಗೆ ಮುಕ್ತಿ ನೀಡಲಾಗುವುದು’ ಎಂದು ಕಂದಾಯ ಸಚಿವ ಅಶೋಕ ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇ ಸ್ವತ್ತು ಈ ಜಿಲ್ಲೆಯ ಬಹುದೊಡ್ಡ ಸಮಸ್ಯೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿಯಲ್ಲಿ ನಾನು ಮತ್ತು ಸಚಿಚರಾದ ಶಿವರಾಮ ಹೆಬ್ಬಾರ ಇದ್ದೇವೆ. ಹಿಂದಿನ ಉಪಸಮಿತಿ ಸಭೆಯಲ್ಲಿ ಇದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ ಮುಂದಿನ ಉಪಸಮಿತಿ ಸಭೆಯಲ್ಲಿ ಇದನ್ನು ಇಟ್ಟು ಈ ಸಮಸ್ಯೆಗೆ ಒಂದು ತಿಂಗಳಲ್ಲಿ ಮುಕ್ತಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಜನರ ಆಶೋತ್ತರಗಳಿಗೆ ಸ್ಪಂದಿಸುವುದಕ್ಕಾಗಿ ಜನರ ಹತ್ತಿರ ಸರಕಾರವೇ ಹೋಗಿ ಬದಲಾವಣೆ ತರುವ ದೃಷ್ಟಿಯಿಂದ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಜನರಿಗೆ ಸವಲತ್ತುಗಳನ್ನು ವಿಳಂಬವಾಗದಂತೆ ತಲುಪಿಸುವಂತೆ ಮಾಡಲು ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ ಎಂದರು.
ಕೋವಿಡ್ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕಂದಾಯ ಇಲಾಖೆಯಿಂದ ೨೬ ಕೋಟಿರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿನಿಂದ ಮೃತರ ಕುಟುಂಬಗಳಿಗೆ ಪರಿಹಾರವಾಗಿ ೧೦ ಕೋಟಿ ರೂ. ನೀಡಲಾಗಿದೆ. ಬೆಳೆಹಾನಿಗೆ ಪರಿಹಾರವಾಗಿ ₹ ೫.೬೦ ಕೋಟಿ, ನೆರೆಯಿಂದ ಹಾನಿಗೀಡಾದ ಮನೆಗಳ ದುರಸ್ತಿ, ಪುನರ್ವಸತಿಗಾಗಿ ₹೧೧.೯೯ ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಪಿಂಚಣಿ ಫಲಾನುಭವಿಗಳಿಗೆ ₹ ೧೮೦ ಕೋಟಿ ಬಿಡುಗಡೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಡಿ ಆಯ್ಕೆಯಾದ ೪೮೨೦ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಿ ಪತ್ರ, ಸಹಾಯಧನದ ಚೆಕ್, ಅಚವೆ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಅನುಷ್ಠಾನಕ್ಕಾಗಿ ೧ ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡುವುದಾಗಿ ಸಚಿವ ಆರ್. ಅಶೋಕ ಘೋಷಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಡುಬಡವನಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬ ಮೂಲ ಆಶಯದಂತೆ ಈ ಕಾರ್ಯಕ್ರಮ ಜಾರಿಗೊಂಡಿದೆ ಎಂದರು. ಈ ಜಿಲ್ಲೆಯಲ್ಲಿ ಇ ಸ್ವತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ಕಂದಾಯ ಸಚಿವವರಾದ ನಿಮ್ಮ ಜೊತೆ ನಾನು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಭೆ ಸೇರಿ ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಜನರ ಆರೋಗ್ಯ, ಜೀವ ರಕ್ಷಣೆ ಹಾಗೂ ಅವರಿಗೆ ಮೂಲ ಸೌಕರ್ಯ ನೀಡುವುದು ಸರ್ಕಾರದ ಮೂಲ ಕರ್ತವ್ಯವಾಗಿದೆ. ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಹೃದಯದಂತಿದ್ದು ಜನರ ನಾಡಿಮಿಡಿತ ಅರಿತು ಕರ್ತವ್ಯ ನಿರ್ವಹಿಸಿ ಯೋಜನೆಗಳು ಅರ್ಹರಿಗೆ ಸಿಗುವಂತೆ ಮಾಡಬೇಕೆಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇ ಸ್ವತ್ತು, ಹಂಗಾಮಿ ಲಾಗಣಿ, ಅರಣ್ಯ ಒತ್ತುವರಿ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಜನರ ಸಮಯ,ಹಣ, ಶ್ರಮ ಉಳಿಸುವ ಸಲುವಾಗಿ ಹಾಗೂ ಗ್ರಾಮೀಣ ಭಾಗದ ಜನರೂ ಅಭಿವೃದ್ಧಿಯ ಭಾಗಿದಾರರಾಗಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ದಿನಕರ್ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ್ ಸಿದ್ಧಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಇದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement