ದೆಹಲಿ: ಹನುಮ ಜಯಂತಿ ಮೆರವಣಿಗೆ ವೇಳೆ ಘರ್ಷಣೆ- 9 ಮಂದಿಗೆ ಗಾಯ, 14 ಮಂದಿ ಬಂಧನ

ನವದೆಹಲಿ: ಶನಿವಾರ ಸಂಜೆ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ನಂತರದ ಹಿಂಸಾಚಾರದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆದಿದೆ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.
ದೆಹಲಿ ಪೊಲೀಸರು ಶನಿವಾರ ರಾತ್ರಿ ಘಟನೆಯ ತನಿಖೆಯನ್ನು ಪ್ರಾರಂಭಿಸಿದರು. ಎಫ್‌ಐಆರ್ ದಾಖಲಿಸಿ 14 ಮಂದಿಯನ್ನು ಬಂಧಿಸಲಾಗಿದೆ.

9 ಮಂದಿಗೆ ಗಾಯ
ಘಟನೆಯಲ್ಲಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಎಂಟು ಪೊಲೀಸರು ಮತ್ತು ಒಬ್ಬ ನಾಗರಿಕ ಸೇರಿದ್ದಾರೆ. ಗಾಯಾಳುಗಳನ್ನು ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಬ್ಬ ಸಬ್ ಇನ್ಸ್‌ಪೆಕ್ಟರ್‌ಗೆ ಗುಂಡು ತಗುಲಿದೆ. ಅವರ ಸ್ಥಿತಿ ಸ್ಥಿರವಾಗಿದೆ.

14 ಮಂದಿ ಬಂಧನ
ಶನಿವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, 14 ಮಂದಿಯನ್ನು ಬಂಧಿಸಲಾಗಿದೆ. 14 ಮಂದಿಯಲ್ಲಿ ಒಬ್ಬರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆತನಿಂದ ಅದಕ್ಕೆ ಬಳಸಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.ಹೆಚ್ಚಿನ ತನಿಖೆ ನಡೆಯುತ್ತಿದೆ. ಘರ್ಷಣೆಯು ಯೋಜಿತ ಸಂಚಿನ ಭಾಗವೇ ಅಥವಾ ಜಗಳದ ನಂತರ ಇದ್ದಕ್ಕಿದ್ದಂತೆ ಭುಗಿಲೆದ್ದಿದೆಯೇ ಎಂದು ಪೊಲೀಸರು ಲೆಕ್ಕಾಚಾರ ಹಾಕುತ್ತಿದ್ದಾರೆ.ಸ್ಥಳೀಯ ಪೊಲೀಸರು ಘಟನೆಯ ತನಿಖೆಯನ್ನು ಮುಂದುವರಿಸಲಿದ್ದಾರೆ ಎಂದು ದೆಹಲಿಯ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಓದಿರಿ :-   ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಾಗಿ ಬಂಧನ: ದೆಹಲಿ ವಿವಿ ಪ್ರಾಧ್ಯಾಪಕರಿಗೆ ಜಾಮೀನು

ಡ್ರೋನ್ಸ್, ಸಿಸಿಟಿವಿ ಫೂಟೇಜ್
ಘಟನೆಯಲ್ಲಿ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಮನೆಗಳ ಮೇಲ್ಛಾವಣಿಯಲ್ಲಿ ಕಲ್ಲುಗಳನ್ನು ಸಂಗ್ರಹಿಸಲಾಗಿದೆಯೇ ಎಂದು ನೋಡಲು ಪೊಲೀಸರು ಡ್ರೋನ್ ದೃಶ್ಯಗಳನ್ನು ಸಹ ಬಳಸುತ್ತಿದ್ದಾರೆ.ಘರ್ಷಣೆಯ ಹೊಸ ವಿಡಿಯೋ ಹೊರಬಿದ್ದಿದ್ದು, ದೆಹಲಿ ಪೊಲೀಸರ ಮುಂದೆ ಜನರು ಕತ್ತಿ ಝಳಪಿಸುತ್ತಿರುವುದನ್ನು ಕಾಣಬಹುದು.
ತೀವ್ರ ಗಸ್ತು
ಏತನ್ಮಧ್ಯೆ, ಶನಿವಾರ ಸಂಜೆ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ತೀವ್ರ ಗಸ್ತು ತಿರುಗಿದ್ದಾರೆ.ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಭಾರೀ ಭದ್ರತೆ ಏರ್ಪಡಿಸಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ