ಗೋ ಹತ್ಯೆ ನಿಷೇಧ ಕಾಯಿದೆ: ಸೆಕ್ಷನ್ 5 ನಿಯಮ ಜಾರಿಗೆ ಸರ್ಕಾರಕ್ಕೆ ಹೈಕೋರ್ಟ್‌ ಅಸ್ತು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ನಿಯಮಗಳನ್ನು (ಜಾನುವಾರು ಸಾಗಣೆ 2021ರ ನಿಯಮಗಳು) ರೂಪಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು ಅದರ ಅಡಿ ರೂಪಿಸಿರುವ ನಿಯಮಗಳ ಜಾರಿಗೆ ಸೋಮವಾರ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದು, ಅದು ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮೊಹಮ್ಮದ್‌ ಆರೀಫ್‌ ಜಮೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವರದಿ ಪ್ರಕಾರ, ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “2021ರ ಜನವರಿ 20ರಂದು ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವ ವರೆಗೆ ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಸರ್ಕಾರವನ್ನು ನಿರ್ಬಂಧಿಸಿತ್ತು. ನ್ಯಾಯಾಲಯದ ಆದೇಶದಂತೆ ಕಾಯಿದೆಯ ಸೆಕ್ಷನ್‌ 5ರ ಜಾನುವಾರು ಸಾಗಣೆ 2021ರ ನಿಯಮಗಳನ್ನು ರೂಪಿಸಿರುವುದರಿಂದ ಕಾಯಿದೆಯ ಸೆಕ್ಷನ್‌ 5 ಅನ್ನು ಜಾರಿ ಮಾಡುವ ಸಂಬಂಧ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಕೋರಿದರು.

ಓದಿರಿ :-   ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದು, ಕಾಯಿದೆ ಮತ್ತು ನಿಯಮಗಳು ಜಾರಿ ಮಾಡುವುದರಿಂದ ನಿರ್ದಿಷ್ಟ ಸಮುದಾಯದ ಕುರಿತು ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಅದಕ್ಕೆ ಅನುಮತಿಸಬಾರದು ಎಂದು ಆಕ್ಷೇಪಿಸಿದರು.
ನ್ಯಾಯಾಲಯದ ಆದೇಶದ ತೆರವಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಮನವಿ ಮತ್ತು ಅದಕ್ಕೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಯನ್ನು ಪೀಠವು ಪರಿಗಣಿಸಿದೆ.
ಇದನ್ನು ಆದೇಶದಲ್ಲಿ ದಾಖಲಿಸಿಕೊಂಡ ನ್ಯಾಯಾಲಯವು “ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020 ಅನ್ನು 2021ರ ಫೆಬ್ರವರಿ 15ರಂದು ಜಾರಿ ಮಾಡಿದ್ದು, 2021ರ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿದೆ. 2021ರ ಮೇ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈಗ ಕಾಯಿದೆ ಸೆಕ್ಷನ್‌ 5ರ ಅಡಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ (ಪ್ರಾಣಿಗಳ ಸಾಗಣೆ 2021ರ ನಿಯಮಗಳು) ರೂಪಿಸಲಾಗಿದೆ. ಈಗ ಸರ್ಕಾರವು ಸೆಕ್ಷನ್‌ 5 ಮತ್ತು ಅದರ ಅಡಿ ರೂಪಿಸಿರುವ ನಿಯಮ ಜಾರಿಗೊಳಿಸುವ ಸಂಬಂಧ ನ್ಯಾಯಾಲಯದ ಅನುಮತಿ ಕೋರಿದ್ದು, ಈ ಸಂಬಂಧ 2021ರ ಜನವರಿ 20ರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿರುವುದಕ್ಕೆ ಅನುಮತಿಸಲಾಗಿದೆ. ಇದು ಮನವಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ” ಎಂದು ಪೀಠವು ಆದೇಶಿಸಿ, ವಿಚಾರಣೆ ಮುಂದೂಡಿದೆ.

ಓದಿರಿ :-   ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದು ಹೈಡ್ರಾಮಾ ಮಾಡಿದ ವಧು...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ