ಪುಸ್ತಕಗಳಿವೆ ಬೇಕಷ್ಟು ಈ ಜಗದ ಉಗ್ರಾಣದಲಿ…ಕಾಯುತಿವೆ ಓದುಗನೇ ನೀ ಯಾವಾಗ ಬರುವೆಯೆಂದು…

(ಏಪ್ರಿಲ್ ೨೩ರಂದು ವಿಶ್ವ ಪುಸ್ತಕ ದಿನಾಚರಣೆಯಾಗಿದ್ದು, ಆ ನಿಮತ್ತ ಲೇಖನ)

ಏಪ್ರಿಲ್ ೨೩ರಂದು ವಿಶ್ವ ಪುಸ್ತಕ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಸಿದ್ಧ ನಾಟಕಕಾರ ವಿಲಿಯಮ್ ಷೇಕ್ಸಪಿಯರ್ ಜನ್ಮ ಮತ್ತು ನಿಧನದ, ಸ್ಪೇನ್ ದೇಶದ ಖ್ಯಾತ ಲೇಖಕ ಮೈಗುಯೇಲ್ ಡೆ. ಸರವೇಲ್ಲಾ, ಇಂಕಾ ಗ್ಯಾರಿಲಾಸೋ ಡೆ ಲಾವೇಗಾ ಮತ್ತು ಜೆಸೆಪ್‌ಪ್ಲಾ ಅವರ ಪುಣ್ಯತಿಥಿಯ ನೆನಪಿಗಾಗಿ ವಿಶ್ವದ ಎಲ್ಲ ಕಡೆಗೆ ಈ ದಿನವನ್ನು ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನವಾಗಿ ಆಚರಿಸಲಾಗುತ್ತಿದೆ.
ಓದುವ, ಮುದ್ರಣ ಮತ್ತು ಕಾಪಿರೈಟ್ ಬಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಯುನೆಸ್ಕೊ ಈ ದಿನಾಚರಣೆಯನ್ನು ೧೯೯೫ ರಿಂದ ಆಚರಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಈಗ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಟಿ.ವಿ. ಚಾನಲ್‌ಗಳು, ಗಣಕಯಂತ್ರದ ಬಳಕೆ, ಮಾಹಿತಿ ತಂತ್ರಜ್ಞಾನದ ಪ್ರಭಾವ, ಅಂತರ್‌ಜಾಲದ ವ್ಯಾಪಕತೆ ಇದಕ್ಕೆ ಕಾರಣವಾಗಿವೆ. ಪುಸ್ತಕ-ಸಂಸ್ಕೃತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಅಗತ್ಯವಿದೆ.
ಯಾವುದೇ ವಿದ್ಯಾರ್ಥಿಯು ಜ್ಞಾನ ಮತ್ತು ಅನುಭವ ಪಡೆಯಬೇಕಾಗದರೆ ಮೊದಲು ದೇಶ ನೋಡಬೇಕು, ಇಲ್ಲವೇ ಕೋಶ ಓದಬೇಕು ಎಂಬ ಗಾದೆ ಮಾತು ಅತ್ಯಂತ ಸಮಂಜಸವಾಗಿದೆ. ದೇಶ ನೋಡಲು ಎಲ್ಲರಿಗೂ ಆಗುವುದಿಲ್ಲ, ಆದರೆ ಕೋಶಗಳನ್ನು ಓದಿ ಜ್ಞಾನ ವಿಕಸನ ಹೊಂದಬಹುದಾಗಿದೆ. ಆದರೆ ವಿದ್ಯಾರ್ಥಿಗಳಲ್ಲಿ ಪಠ್ಯ/ಪಠ್ಯೇತರ ಪುಸ್ತಕಗಳ ಓದುವಿಕೆಯನ್ನು ಗಮನಿಸಿದಾಗ ಅದು ತೀವ್ರ ಕುಸಿತದ ಹಾದಿಯಲ್ಲಿರುವುದು ಕಂಡು ಬರುತ್ತದೆ. ಓದಿನಿಂದ ಆಗುವ ಲಾಭಗಳನ್ನು ಗ್ರಂಥಪಾಲಕರು, ಶಿಕ್ಷಕರು, ಪಾಲಕರು, ಪೋಷಕರು ವಿದ್ಯಾರ್ಥಿಗಳಿಗೆ ತಿಳಿಸುವುದು ಅವಶ್ಯಕವಾಗಿದೆ.

ಪುಸ್ತಕಗಳು ಸಂಸ್ಕೃತಿಯ ವಾಹಕಗಳೂ ಹೌದು, ಸಂಸ್ಕೃತಿ ಸಮೃದ್ಧಿಗೆ ಸಹಾಯಕವೂ ಹೌದು, ಪುಸ್ತಕಗಳು ಭವಿಷ್ಯದ ಜನಾಂಗದ ಆಸ್ತಿ, ಪುಸ್ತಕಗಳು ಮನಸ್ಸಿಗೆ ಹಿಡಿಸುವ ದಿವ್ಯ ಔಷಧಿಗಳು, ಪುಸ್ತಕವನ್ನು ಹಿಡಿದುಕೊಂಡಾಗಲೇ ಬದುಕಿಗೆ ಹತ್ತಿರವಾದ ಅನುಭವವಾಗುತ್ತದೆ ಎಂದು ಸಾಹಿತಿಗಳು, ಜ್ಞಾನಿಗಳು, ದಾರ್ಶನಿಕರು, ಮಹಾಪುರುಷರು, ವಿದ್ವಾಂಸರು, ಪುಸ್ತಕಗಳ ಮಹತ್ವ ಕುರಿತು ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ.
ಓದುವ ಹವ್ಯಾಸವನ್ನು ಬೆಳೆಸಲು ಮನೆಗಳಲ್ಲಿ ಉತ್ತಮ ಗ್ರಂಥಗಳನ್ನು ಹೊಂದಬೇಕಲ್ಲದೇ, ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಹೊಂದಿರಬೇಕು, ಪುಸ್ತಕ ಪ್ರದರ್ಶನ, ಮತ್ತು ಮಾರಾಟ ಮಳಿಗೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು, ಶಿಕ್ಷಕರು ತಮಗೆ ಪ್ರೇರಣೆ ನೀಡದ ಮತ್ತು ಹೊಸ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಓದಲು ಪ್ರೇರಣೆ ನೀಡಬೇಕು. ಸಂವಾದ, ಕವಿಗೋಷ್ಠಿ, ಚಿಂತನ ಮಂಥನ, ಭಾಷಣ, ಪ್ರಬಂಧ, ಚರ್ಚೆ ಮುಂತಾದ ಸ್ಪರ್ಧೆಗಳನ್ನು ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆಗಳನ್ನು ವರ್ಷದುದ್ದಕ್ಕೂ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಬಹುದಾಗಿದೆ.
ಪುಸ್ತಕಗಳ ಪ್ರಕಟಣೆ ಇಂದು ಬೃಹತ್ ಉದ್ದಿಮೆಯಾಗಿ ಬೆಳೆಯುತ್ತಿದೆಯಲ್ಲದೆ, ಹೊಸ ವಿನ್ಯಾಸಗಳ ಪುಸ್ತಕಗಳು ಪ್ರತಿದಿನ ವಿಶ್ವದ್ಯಾಂತ್ಯತ ಪ್ರಕಟವಾಗುತ್ತಿವೆ. ಇಂಟರ್‌ನೆಟ್‌ ಮೂಲಕವೂ ಸಾವಿರಾರು ಇ-ಪುಸ್ತಕಗಳ ಅವಲೋಕನ ಇಂದು ಸಾಧ್ಯವಾಗಿದೆ. ಯುಜಿ ಎನ್‌ಲಿಸ್ಟ್‌ ಮೂಲಕ ರೂ.೫೦೦೦ ಪಾವತಿ ಮಾಡುವ ಮೂಲಕ ಕಾಲೇಜುಗಳು ೧,೦೦,೦೦೦ ಕ್ಕೂ ಹೆಚ್ಚಿನ ಗ್ರಂಥಗಳನ್ನು ೬,೦೦೦ಕ್ಕೂ ಹೆಚ್ಚಿನ ಜರ್ನಲ್‌ಗಳು ಓದುಗರಿಗೆ ಓದಗಿಸುತ್ತಿದೆ. ರಾಜ್ಯದ ಸಾರ್ವಜನಿಕ ಗ್ರಂಥಾಲಯವು ಸಾರ್ವಜನಿಕರಿಗೆ ಅಪಾರವಾದ ಈ ಪುಸ್ತಕ, ಪತ್ರಿಕೆ, ನಿಯತಕಾಲಿಕೆಗಳನ್ನು ಒದಗಿಸುತ್ತಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾಲಯಗಳು, ಮಠಮಾನ್ಯಗಳು,ರಾಮಕೃಷ್ಣ ವಿವೇಕಾನಂದ ಆಶ್ರಮಗಳು, ಪ್ರಕಾಶಕರು, ಪುಸ್ತಕಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ. ಒಳ್ಳೆಯ ಪುಸ್ತಕಗಳಿಗೆ ನೋಬೆಲ್, ಜ್ಞಾನಪೀಠ, ಬುಕರ್‌ರಂಥ ಪ್ರಶಸ್ತಿಗಳು ನೀಡುವ ಹವ್ಯಾಸ ಮೊದಲಿನಿಂದ ಬಂದಿರುವುದನ್ನು ಕಾಣುತ್ತೇವೆ. ಪುಸ್ತಕಗಳನ್ನು ಕೊಂಡು ಓದುವ ಮೂಲಕ ಮತ್ತು ಸಭೆ ಸಮಾರಂಭಗಳಲ್ಲಿ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಎಲ್ಲರೂ ಪ್ರಯತ್ನಿಸುವಂತಾಗಬೇಕು.
 ಓದು ವಿದ್ಯಾರ್ಥಿಯನ್ನು ಶೀಘ್ರಗಾಹಿಯನ್ನು ಮಾಡುವುದರ ಜೊತೆಗೆ ಜ್ಞಾನವನ್ನು ಹೆಚ್ಚಿಸುವುದು.
 ಓದು ಮಾನಸಿಕ ನೆಮ್ಮದಿಯನ್ನು ನೀಡುವುದು.
 ಓದು ಸಾಮಾಜಿಕ ಕಳಕಳಿ ಮೂಡಿಸುವುದು.
 ಓದು ಆತ್ಮವಿಶ್ವಾಸವನ್ನು ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತದೆ.
 ಓದು ವಿಷಯಗಳನ್ನು ಗ್ರಹಿಸುವ ಶಕ್ತಿ ಹೆಚ್ಚಿಸುತ್ತದೆ.
 ಓದು ತರ್ಕ ಹಾಗೂ ವಿವೇಚನೆ ಶಕ್ತಿ ಹೆಚ್ಚಿಸುತ್ತದೆ.
 ಓದು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ.
 ಓದು ದಿನನಿತ್ಯ ಆಗುವ ವಿದ್ಯಮಾನಗಳ ತಿಳಿವನ್ನು ಹೆಚ್ಚಿಸುತ್ತದೆ
 ಓದು ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಸಹಾಯಕವಾಗುವುದು.
 ಓದು ಉತ್ತಮ ಜೀವನ ಹಾಗೂ ಸಮಯೋಚಿತ ವಾಕ್‌ಚಾತುರ್ಯ ಹೆಚ್ಚಿಸುವುದು.
 ಓದಿನಿಂದ ಅಂತರಂಗದ ವಿಕಾಸವಾಗುತ್ತದೆ.
 ಓದಿನಿಂದ ಭಾಷಾ ಸಾಮರ್ಥ ಹೆಚ್ಚುವದಲ್ಲದೆ, ಶಬ್ದ ಭಂಡಾರ ಹೆಚ್ಚುವುದು.
 ಓದಿನಿಂದ ಮಾಹಿತಿ ಹುಡುಕುವುದು ಸರಳವಾಗುವುದು.
 ಓದಿನಿಂದ ಲೋಕ ವ್ಯವಹಾರ ಜ್ಞಾನ ಬೆಳೆಯುವುದು.
 ಓದಿನಿಂದ ಬರೆಯುವ, ಮಾತನಾಡುವ ಶೈಲಿ ಉತ್ತಮಗೊಳ್ಳುವುದು.
 ಓದಿನಿಂದ ಸೃಜನಶೀಲತೆ, ಸೃಜನಾತ್ಮಕವಾಗಿ ಯೋಚಿಸುವ ಶಕ್ತಿ, ವಿಶ್ಲೇಷಣಾತ್ಮಕ ವಿಚಾರಶೀಲತೆ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಅಭಿವೃದ್ಧಿಯಾಗುತ್ತದೆ
 ಓದಿನಿಂದ ಸವಾಲುಗಳನ್ನು ಎದುರಿಸುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಮನೋಭಾವ ಬೆಳೆಯುತ್ತದೆ
 ಓದಿನಿಂದ ಆತ್ಮ ತೃಪ್ತಿ ದೊರೆಯುತ್ತದೆ
 ಓದಿನಿಂದ ಜೀವನದಲ್ಲಿ ಶಿಸ್ತು, ದೃಢನಿರ್ಧಾರ ಮತ್ತು ಅರ್ಪಣಾ ಮನೋಭಾವ ಬೆಳೆಯುತ್ತದೆ

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಓದಿನ ಸುಖ ಕುರಿತು ಡಾ. ಹಾ.ಮಾ.ನಾಯಕ ಅವರು, “ಜಗತ್ತಿನಲ್ಲಿ ನಾವು ದುಃಖಿಗಳು ಎಂಬ ಮಾತನ್ನು ನಂಬಬಾರದು. ಸುಖದ ಬೀಗದ ಕೈ ನಮ್ಮಲ್ಲಿ ಇದೆ. ಎಂಥ ನಿರಾಶೆಯ, ದುಃಖ ವ್ಯಥೆಯ ಸಂದಂರ್ಭವೇ ಇರಲಿ, ಒಂದು ಒಳ್ಳೆಯ ಪುಸ್ತಕ ಓದಿ ಸುಖಿಸಿ, ಆ ಸುಖದ ಲೋಕದಲ್ಲಿ ನಕ್ಷತ್ರಗಳು ಸಿಗುತ್ತವೆ. ಹಕ್ಕಿಗಳು ಹಾಡುತ್ತವೆ, ಹೂವು ಅರಳುತ್ತವೆ, ನದಿಗಳು ಹರಿಯುತ್ತವೆ. ನೀವಾದರೂ ಓದಿನ ಸುಖದಲ್ಲಿ ತೇಲಿ ತೇಲಿ ಹೋಗುತ್ತೀರಿ” ಎಂದಿದ್ದಾರೆ.

-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement