ಕೊರೊನಾ ಸೋಂಕು ತಡೆ: ಸದ್ಯಕ್ಕಂತೂ ಕಠಿಣ ನಿರ್ಬಂಧ ಜಾರಿಯಿಲ್ಲ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಡೆಗೆ ಸದ್ಯಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿಲ್ಲ. ಮೂರು ಟಿ ಸೂತ್ರವನ್ನು ಅಳವಡಿಸಿಕೊಂಡು ಸೋಂಕು ನಿಯಂತ್ರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೋವಿಡ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಶ್ಯಕತೆ ಬಂದಾಗ ಮಾತ್ರ ಕಠಿಣ ಕ್ರಮ ಜಾರಿ ಮಾಡುತ್ತೇವೆ. ಸದ್ಯಕ್ಕೆ ಕಠಿಣ ತೀರ್ಮಾನಗಳು ಅಗತ್ಯವಿಲ್ಲ. ರಾಜ್ಯದಲ್ಲಿ ಇನ್ನು ಮುಂದೆ ಕೊರೊನಾ ಪರೀಕ್ಷೆ ಹೆಚ್ಚು ಮಾಡುತ್ತೇವೆ. ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರ ಮೇಲೆ ನಿಗಾ ಇಡುತ್ತೇವೆ. ಅನವಶ್ಯಕವಾಗಿ ಯಾವುದೇ ಕಠಿಣ ನಿಯಮಗಳನ್ನು ಹೇರುವುದಿಲ್ಲ. ಲಸಿಕೆ ನೀಡಲು ಹೆಚ್ಚು ಗಮನ ನೀಡುತ್ತೇವೆ. ಶಾಲೆಗಳಲ್ಲೂ ಲಸಿಕಾ ಅಭಿಯಾನ ನಡೆಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಇನ್ನು ಮುಂದೆ ಹೆಚ್ಚು ಕೊರೊನಾ ಪರೀಕ್ಷೆ ಮಾಡುತ್ತೇವೆ. ಬೆಂಗಳೂರು ಒಂದರಲ್ಲೇ ನಿತ್ಯ ಕನಿಷ್ಠ ೧೦ ಸಾವಿರ ಹಾಗೂ ರಾಜ್ಯದ ಇತರೆಡೆ ಪ್ರತಿನಿತ್ಯ ೨೦ ಸಾವಿರ ಕೊರೊನಾ ಪರೀಕ್ಷೆ ನಡೆಸಲಾಗುವುದು. ವಿದೇಶಗಳಿಂದ ಬರುವವರ ಮೇಲೆ ಹೆಚ್ಚು ನಿಗಾ ಇಡಲಾಗುವುದು, ಸದ್ಯ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದರು.
ಸಂಭಾವ್ಯ ೪ನೇ ಅಲೆಯನ್ನು ಎದುರಿಸಲು ರಾಜ್ಯ ಸಮರ್ಥವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ೫೦ ಸಾವಿರ, ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ೧ ಲಕ್ಷ ಹಾಸಿಗೆಗಳಿವೆ. ಆಕ್ಸಿಜನ್ ಸಹ ಲಭ್ಯವಿದೆ ಎಂದರು.
ಪೆಟ್ರೋಲ್-ಡೀಸಲ್ ಮೇಲಿನ ಸ್ಥಳೀಯ ತೆರಿಗೆಗಳನ್ನು ಇಳಿಕೆ ಮಾಡುವ ಬಗ್ಗೆ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಮುಂದೆ ತೀರ್ಮಾನ ಮಾಡುವುದಾಗಿ ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement