ಪಿಎಸ್​ಐ ನೇಮಕಾತಿ ಪರೀಕ್ಷೆ ಹಗರಣ: 18 ದಿನದಿಂದ ತಲೆಮರೆಸಿಕೊಂಡಿದ್ದ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ಹಾಗೂ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿವ್ಯ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಸಿಐಡಿ ಎಸ್​ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿತ ಆರೋಪಿಗಳಲ್ಲಿ ದಿವ್ಯಾ ಹಾಗರಗಿ, ಸುನೀತಾ ಮತ್ತು ಅರ್ಚನಾ ಸೇರಿದ್ದಾರೆ. ಈ ಮೂವರು ಆರೋಪಿಗಳ ಬಂಧನವನ್ನು ಸಿಐಡಿ ಮೂಲಗಳು ಖಚಿತಪಡಿಸಿದ್ದು, ಉಳಿದ 2 ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರ ಶಾಮೀಲು ಸಾಬೀತಾದರೆ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ದಿ ವ್ಯಾ ಒಂದು ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾದಲ್ಲಿದ್ದರು. ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾಗಿರುವ ದಿವ್ಯಾ ಹಾಗರಗಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡವು ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ್ ಹಾಗರಗಿಯನ್ನು ಬಂಧಿಸಿದ್ದರು. ನಾಪತ್ತೆಯಾಗಿದ್ದ ದಿವ್ಯಾ ಹಾಗರಗಿಗಾಗಿ ಕಳೆದ 18 ದಿನಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಮಹಾರಾಷ್ಟ್ರದಲ್ಲೇ ದಿನಕ್ಕೊಂದು ಸ್ಥಳಬದಲಿಸತ್ತಿದ್ದುದರಿಂದ ಪೊಲೀಸರಿಗೆ ಬಂಧಿಸುವುದು ಕಷ್ಟವಾಗಿತ್ತು. ಸಾಕಷ್ಟು ದಿನಗಳ ವರೆಗೆ ದಿವ್ಯಾ ಹಾಗರಗಿ ಪತ್ತೆಯಾಗದ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಆರೋಪಿಗಳಾದ ದಿವ್ಯಾ ಹಾಗರಗಿ, ಮಂಜುನಾಥ್, ಕಾಶೀನಾಥ್, ರವೀಂದ್ರ, ಶಾಂತಿಬಾಯಿ, ಅರ್ಚನಾ ಅವರನ್ನು ಬಂಧಿಸುವಂತೆ ಕಲಬುರಗಿಯ ಮೂರನೇ ಜೆಎಂಎಫ್​ಸಿ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

2021 ರ ಆಗಸ್ಟ್ 3 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. 2022ರ ಜನವರಿ 19 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೂಡಾ ಪ್ರಕಟ ಮಾಡಲಾಗಿತ್ತು. ಆದರೆ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್​ಐ ಪರೀಕ್ಷೆ ಅಕ್ರಮ ನಡೆದ ಆರೋಪ ಬಲವಾಗಿ ಕೇಳಿಬಂದಿತ್ತು. ನೇಮಕಾತಿಯಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ದೂರು ನೀಡಿದ್ದರು. ಗೃಹ ಇಲಾಖೆಯಿಂದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಪರೀಕ್ಷೆ ಮುಗಿದ ಮೇಲೆ ಒಎಂಆರ್ ಶೀಟ್​ನಲ್ಲಿ ಖಾಲಿ ಬಿಟ್ಟ ಪ್ರಶ್ನೆಗಳಿಗೆ ದಿವ್ಯಾ ಹಾಗರಗಿ ಉತ್ತರ ಬರೆಸಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಹತ್ತು ಜನ ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಯಲ್ಲಿ ಇತ್ತು. ಹತ್ತು ಅಭ್ಯರ್ಥಿಗಳೂ ಅಕ್ರಮವಾಗಿ ಪರೀಕ್ಷೆ ಬರೆದಿರುವ ಆರೋಪವಿದೆ. ಈ ಪೈಕಿ ಈಗಾಗಲೇ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಕೊಠಡಿ ಮೇಲ್ವಿಚಾರಕಿಯರನ್ನು ಪೊಲೀಸರು ಬಂಧಿಸಿದ್ದಾರೆ.

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement