ರಾಜ್ಯ ಸರ್ಕಾರದ ೭೨ ಗಂಟೆಯಲ್ಲಿ ಮನೆಬಾಗಿಲಿಗೆ ಪಿಂಚಣಿ ಯೋಜನೆ ಸಹಾಯವಾಣಿಗೆ ಚಾಲನೆ

ಬೆಂಗಳೂರು: ನಾಗರಿಕರಿಗೆ ೭೨ ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ನೀಡುವ ಹಲೋ ಕಂದಾಯ ಸಚಿವರೇ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ನಾಗರಿಕರಿಗಾಗಿ ಜಾರಿ ಮಾಡಿರುವ ನೂತನ ಸುಧಾರಣಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರವು ನಾಗರಿಕರಿಗೆ ೯ ವಿವಿಧ ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿ ಮಾಡಿದ್ದು, ಸುಮಾರು ೭೩ ಲಕ್ಷ ಫಲಾನುಭವಿಗಳು ವಾರ್ಷಿಕ ೭೮೦೦ ಕೋಟಿ ರೂ. ಪಿಂಚಣಿ ಪಡೆಯುತ್ತಿದ್ದಾರೆ. ಈ ಪಿಂಚಣಿ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತಂದು ಅರ್ಹರಿಗೆ ಯಾವುದೇ ವಿಳಂಬ, ಅಡಚಣೆಗಳಿಲ್ಲದೆ ಪಿಂಚಣಿ ಆದೇಶವನ್ನು ೭೨ ಗಂಟೆಗಳಲ್ಲಿ ತಲುಪಿಸಲು ಹಲೋ ಕಂದಾಯ ಸಚಿವರೇ ಸಹಾಯವಾಣಿಯಂತಹ ವಿನೂತನ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಹಾಯವಾಣಿಗೆ ಪಿಂಚಣಿಗೆ ಅರ್ಹರಿರುವ ಯಾರೇ ದೂರವಾಣಿ ಮಾಡಿದರೂ ಅವರ ಹೆಸರು, ಆಧಾರ್ ಕಾರ್ಡ್ ವಿವರಗಳನ್ನು ಪಡೆದು ಅದನ್ನು ಗ್ರಾಮ ಲೆಕ್ಕಿಗರಿಗೆ ಕಳುಹಿಸಿ ಅವರ ಮೂಲಕ ಫಲಾನುಭವಿಗಳ ಮನೆ ಮತ್ತು ವಿವರಗಳ ಪರಿಶೀಲನೆ ನಡೆಸುತ್ತಾರೆ. ನಂತರ ಮೊಬೈಲ್ ಆಪ್ ಮೂಲಕ ಉಪತಹಶೀಲ್ದಾರ್‌ಗೆ ತಲುಪಿಸಿ ಅವರು ಆ ಮಾಹಿತಿ ಆಧಾರದ ಮೇಲೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗುತ್ತದೆ. ಆದೇಶ ಪಡೆದ ಮುಂದಿನ ತಿಂಗಳಿನಿಂದಲೇ ಫಲಾನುಭವಿಗಳು ಪಿಂಚಣಿ ಪಡೆಯುತ್ತಾರೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ಈ ಪ್ರಕ್ರಿಯೆಗಳು ೭೨ ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ ಹಾಗೂ ಇದು ಸಂಪೂರ್ಣ ಕಾಗದ ರಹಿತ ವ್ಯವಸ್ಥೆಯಾಗಿದೆ. ಮೊಬೈಲ್ ಆಪ್ ಮೂಲಕವೇ ಎಲ್ಲವೂ ನಡೆಯುತ್ತದೆ. ದೇಶದಲ್ಲೇ ಈ ವ್ಯವಸ್ಥೆ ಮೊದಲನೆಯದ್ದಾಗಿದ್ದು, ಕುಟುಂಬದ ವಾರ್ಷಿಕ ಆದಾಯ ೩೨ ಸಾವಿರಕ್ಕಿಂತ ಕಡಿಮೆ ಇರುವವರು ಪಿಂಚಣಿ ಪಡೆಯಲು ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ದೂರವಾಣಿ ಮಾಡಬಹುದು ಎಂದು ಮಾಹಿತಿ ನೀಡಿದರು.
ಈಗಾಗಲೇ ರಾಜ್ಯ ಸರ್ಕಾರ ೨೦೨೧ ರ ಜನವರಿಯಿಂದ ಮನೆ ಬಾಗಿಲಿಗೆ ಮಾಸಾಶನ ಕಾರ್ಯಕ್ರಮವನ್ನು ಜಾರಿ ಮಾಡಿದೆ. ಈ ವ್ಯವಸ್ಥೆಯಲ್ಲಿ ಪಿಂಚಣಿ ಪಡೆಯಲು ೧೫ ದಿನಗಳಾದರೂ ಬೇಕು. ಹಾಗಾಗಿ ಹೊಸ ವ್ಯವಸ್ಥೆ ಮೂಲಕ ೭೨ ಗಂಟೆಗಳಲ್ಲಿ ಪಿಂಚಣಿ ಆದೇಶವನ್ನು ಫಲಾನುಭವಿಗಳಿಗೆ ಹಲೋ ಕಂದಾಯ ಸಚಿವರೇ ಸಹಾಯವಾಣಿ ಮೂಲಕ ನೀಡಲಾಗುತ್ತದೆ ಎಂದು ಅವರು ಹೇಳಿದರು.

೩.೫ ಬೋಗಸ್ ಫಲಾನುಭವಿಗಳು ಪತ್ತೆ
ರಾಜ್ಯದಲ್ಲಿ ಈ ವರ್ಷ ೩.೫ ಲಕ್ಷ ಬೋಗಸ್ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇದರಿಂದ ವಾರ್ಷಿಕ ೪೩೦ ಕೋಟಿ ರೂ.ಗಳು ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಿದೆ.ನವೋದಯ ಮೊಬೈಲ್ ಆಪ್ ಮೂಲಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದ್ದು, ಮರಣ ಹೊಂದಿರುವವರಿಗೆ ಪಿಂಚಣಿ ರದ್ದು ಸೇರಿದಂತೆ ಇಲ್ಲಿಯವರೆಗೂ ೩.೫೮ ಲಕ್ಷ ಅನರ್ಹರನ್ನು ಗುರುತಿಸಿ ಪಿಂಚಣಿಯನ್ನು ರದ್ದು ಮಾಡಲಾಗಿದೆ. ಪಿಂಚಣಿ ವ್ಯವಸ್ಥೆಯಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರು, ವಿಧವೆಯರು, ಅವಿವಾಹಿತ ಅಥವಾ ವಿಚ್ಛೇಧಿತ ಮಹಿಳೆಯರು, ತೃತೀಯ ಲಿಂಗದವರು, ಆಸಿಡ್ ದಾಳಿಗೆ ಒಳಗಾದ ಮಹಿಳೆಯರು ಮತ್ತು ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಈ ವರ್ಷ ೯೪೮೩.೫೧ ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement