ಲ್ಯಾಂಡ್ ಆಗುವ ವೇಳೆ ಬಿರುಗಾಳಿಗೆ ಸಿಲುಕಿದ ಸ್ಪೈಸ್ ಜೆಟ್ ವಿಮಾನ -ಹಲವರಿಗೆ ಗಾಯ

ಕೊಲ್ಕತ್ತಾ: ಮುಂಬೈನಿಂದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ದುರ್ಗಾಪುರದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ತೀವ್ರ ಗಾಳಿಗೆ ಸಿಲುಕಿ ಕೆಲಕಾಲ ತೊಂದರೆ ಅನುಭವಿಸಿತು.
ಕೊನೆಗೂ ಪೈಲಟ್​ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ದುರಂತ ತಪ್ಪಿಸಿದ್ದಾರೆ. ತೀವ್ರ ಕುಲುಕಾಟದಿಂದ ಸುಮಾರು 40 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 12 ಮಂದಿಗೆ ತೀವ್ರಗಾಯಗಳಾಗಿವೆ. ಸದ್ಯಕ್ಕೆ ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಸ್ಪೈಸ್​ಜೆಟ್ ವಕ್ತಾರರು ತಿಳಿಸಿದ್ದಾರೆ.

ವಿಮಾನದಲ್ಲಿ 188 ಪ್ರಯಾಣಿಕರಿದ್ದರು ಹಾಗೂ ದುರ್ಗಾಪುರದಲ್ಲಿ ಲ್ಯಾಂಡಿಂಗ್ ವೇಳೆ ಪ್ರಬಲ ಸುಂಟರಗಾಳಿಗೆ ವಿಮಾನ ಸಿಲುಕಿತು. ಕ್ಯಾಬಿನ್​ ಬ್ಯಾಗೇಜ್​ನಲ್ಲಿದ್ದ ಸಾಮಾನುಗಳು ಕೆಳಗೆ ಉರುಳಿ ಹಲವು ಪ್ರಯಾಣಿಕರ ತಲೆಗೆ ಗಾಯವಾಯಿತು. ಪ್ರಯಾಣಿಕರು ಭಯಗೊಂಡು ಕಿರುಚಿದರು. ತೀವ್ರ ಅಲುಗಾಟದಿಂದ ಹಲವರಿಗೆ ಗಾಯಗಳಾದವು. ವಿಮಾನ ಲ್ಯಾಂಡ್ ಆದ ತಕ್ಷಣ ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂಕ್ತ ಚಿಕಿತ್ಸೆಯ ನಂತರ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸ್ಪೈಸ್​ಜೆಟ್, ಮುಂಬೈನಿಂದ ದುರ್ಗಾಪುರಕ್ಕೆ ಬರುತ್ತಿದ್ದ ಸ್ಪೈಸ್​ಜೆಟ್​ ವಿಮಾನ ಎಸ್​ಜಿ-945 ಹಾರುತ್ತಿದ್ದ ಎತ್ತರ ಕಡಿಮೆ ಮಾಡಿಕೊಳ್ಳುವ ಅವಧಿಯಲ್ಲಿ ಸುಂಟರಗಾಳಿಗೆ ಸಿಲುಕಿತು. ಕೆಲ ಪ್ರಯಾಣಿಕರಿಗೆ ಇದರಿಂದ ಗಾಯಗಳಾಗಿದ್ದು ದುರದೃಷ್ಟಕರ. ದುರ್ಗಾಪುರದಲ್ಲಿ ವಿಮಾನವು ಲ್ಯಾಂಡ್ ಆದ ತಕ್ಷಣ ಎಲ್ಲ ಗಾಯಾಳುಗಳಿಗೂ ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement