ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಶಾಸಕ ಪ್ರಿಯಾಂಕ್‌ ಖರ್ಗೆಗೆ ಮತ್ತೊಂದು ನೋಟಿಸ್‌ ನೀಡಿದ ಸಿಐಡಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಗೆ ಸಿಐಡಿ ಮತ್ತೊಂದು ನೋಟಿಸ್‌ ನೀಡಿದೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ಪಿಂಗ್‌ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸಿಐಡಿ ನೋಟಿಸ್‌ನಲ್ಲಿ ತಿಳಿಸಿದೆ.
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್‌ ಖರ್ಗೆ ಆಡಿಯೋ ಕ್ಲಿಪ್‌ ಒಂದನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 25ಕ್ಕೆ ಹಾಜರಾಗಿ ಸಾಕ್ಷಿಗಳನ್ನು ನೀಡಿ ಎಂದು ಏಪ್ರಿಲ್‌ 24ರಂದು ಸಿಐಡಿ ನೋಟಿಸ್‌ ನೀಡಿತ್ತು. ಆದರೆ, ಪ್ರಿಯಾಂಕ್‌ ಖರ್ಗೆ ಹಾಜರಾಗಿರಲಿಲ್ಲ. ಬದಲಾಗಿ ಏಪ್ರಿಲ್‌ 28ರಂದು 4 ಪುಟಗಳ ಲಿಖಿತ ಉತ್ತರ ನೀಡಿದ್ದರು.

ಈಗ ಮತ್ತೆ ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌ ನೀಡಿರುವ ಸಿಐಡಿ, ಈ ಹಿಂದೆ ಸಲ್ಲಿಸಿರುವ ಉತ್ತರವನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡುಬಂದಿವೆ. ಸಾರ್ವಜನಿಕ ಜಾಲತಾಣಗಳಲ್ಲಿ ಎಷ್ಟೋ ಅನಗತ್ಯ ಹಾಗೂ ನೈಜತೆಯಿಲ್ಲದ ಮಾಹಿತಿಗಳು ಹರಿದಾಡುತ್ತಿವೆ. ಅವುಗಳನ್ನು ತನಿಖೆಯಲ್ಲಿ ಸಾಕ್ಷ್ಯವನ್ನಾಗಿಸಿ ಅಳವಡಿಸಿಕೊಳ್ಳಲು ಬರುವುದಿಲ್ಲ ಎಂದು ಸಿಐಡಿ ಹೇಳಿದೆ.
ಶಾಸಕ ಪ್ರಿಯಾಂಕ್ ಖರ್ಗೆಗೆ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿಯ ಸಹಾಯಕ ತನಿಖಾಧಿಕಾರಿ ನರಸಿಂಹಮೂರ್ತಿ ಪಿ ಅವರು ನೋಟಿಸ್ ಜಾರಿ ಮಾಡಿದ್ದು, ಅದರಲ್ಲಿ ದಿನಾಂಕ 28-04-2022ರಂದು ಒಂದು ಉತ್ತರವನ್ನು ನೀವು ಸಲ್ಲಿಸಿದ್ದು, ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡು ಬಂದಿರುತ್ತವೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

ಗೌರವಾನ್ವಿತ ವಿಧಾನಸಭಾ ಸದಸ್ಯರಾದ ಸುದ್ದಿಗೋಷ್ಠಿಯಲ್ಲಿ ಆಡಿಯೋ ಕ್ಲಿಪ್ಪಿಂಗ್‌ ಅನ್ನು ಹಾಜರುಪಡಿಸಿ, ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇನ್ನು ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದ್ದೀರಿ. ಅದನ್ನು ಗಮನಿಸಿದ ಬಳಿಕ ಮಾಧ್ಯಮದವರ ಮುಂದೆ ಆಡಿಯೋ ಕ್ಲಿಪ್ಪಿಂಗ್‌ ಅನ್ನು ಹಾಜರುಪಡಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿರುತ್ತೀರಿ ಎಂದು ಭಾವಿಸಿ ನೋಟಿಸ್‌ ನೀಡಲಾಗಿತ್ತು. ಆದರೆ, ನೀವು ಸಾಕ್ಷಿಗಳನ್ನು ಒದಗಿಸಿಲ್ಲ ಎಂದು ಸಿಐಡಿ ತನ್ನ ಮತ್ತೊಂದು ನೋಟಿಸ್‌ನಲ್ಲಿ ತಿಳಿಸಿದೆ.
ಈ ಹಿನ್ನಲೆಯಲ್ಲಿ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಶಾಸಕರಾದ ತಾವು, ಈ ನೋಟಿಸ್ ಮುಟ್ಟಿದ ಎರಡು ದಿನಗಳೊಳಗಾಗಿ ಕೆಳಗೆ ಸಹಿ ಮಾಡಿದ ಸಹಾಯಕ ತನಿಖಾಧಿಕಾರಿಯವರ ಮುಂದೆ, ಹಾಜರಾಗಿ, ಪ್ರಕರಣದ ತನಿಖೆಗೆ ಸಹಾಯವಾಗಬಹುದಾದ ತಮ್ಮ ಬಳಿಯಿರುವಂತ ದಾಖಲಾತಿ ಹಾಗೂ ಮಾಹಿತಿಯನ್ನು ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement