ಬುರ್ಖಾ ಧರಿಸಿ ಮಾಲ್‌ಗಳಲ್ಲಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು: ಮುಸ್ಲಿಂ ಯುವತಿಯರಿಗೆ ಎಂಡಿಎಫ್ ಬೆದರಿಕೆ, ಪೊಲೀಸರಿಂದ ತನಿಖೆ

posted in: ರಾಜ್ಯ | 0

ಮಂಗಳೂರು: ಬುರ್ಖಾ ಧರಿಸಿ ಮಾಲ್​ಗಳಲ್ಲಿ ಓಡಾಡುವ ಮುಸ್ಲಿಂ ಯುವತಿಯರಿಗೆ ಮುಸ್ಲಿಂ ಡಿಫೆನ್ಸ್ ಫೋರ್ಸ್ (ಎಂಡಿಎಫ್) ಹೆಸರಿನಲ್ಲಿ ಬೆದರಿಕೆ ಒಡ್ಡಲಾಗುತ್ತಿದ್ದು, ಈ ನೈತಿಕ ಪೊಲೀಸ್​ಗಿರಿ ವಿರುದ್ಧ ಈಗ ಮಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ,​ ಸಾಮಾಜಿಕ ಜಾಲತಾಣದಲ್ಲಿ ಎಂಡಿಎಫ್ ಖಾತೆಯೊಂದನ್ನು ಸೃಷ್ಟಿಸಿ ಅದರಲ್ಲಿ ಬೆದರಿಕೆ ಸಂದೇಶಗಳನ್ನು ಹಾಕಲಾಗಿದೆ. ಬುರ್ಖಾ ಧರಿಸಿ ಮಾಲ್​ಗಳಲ್ಲಿ ಅಸಭ್ಯ ವರ್ತನೆ ಕಂಡುಬರುತ್ತಿದೆ. ಎಚ್ಚೆತ್ತುಕೊಳ್ಳಿ ಪೋಷಕರೆ, ಎಂಡಿಎಫ್ ಸಂಘಟನೆಗಳ ಕೈಗೆ ಸಿಕ್ಕಿ ಮಾನ ಹರಾಜಾಗುವ ಮುನ್ನ ಎಚ್ಚೆತ್ತುಕೊಳ್ಳಿ ” ಎಂಬ ಬೆದರಿಕೆ ಸಂದೇಶ ಹಾಕಲಾಗಿದೆ.

ಸಿಟಿ ಸೆಂಟರ್ ಪಾರ್ಕಿಂಗ್ ಸ್ಥಳದಲ್ಲಿ ಬುರ್ಖಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆ ಕೊಟ್ಟಿದ್ದೇವೆ. ಇನ್ನು ಮುಂದೆ ಈ ತರಹದ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ ಧರ್ಮದೇಟು ಕೊಟ್ಟು ಮುಲಾಜಿಲ್ಲದೆ ಕಾರ್ಯನಿರ್ವಹಿಸಲಿದ್ದೇವೆ. ಆದ್ದರಿಂದ ಪೋಷಕರೇ ನಿಮ್ಮ ಮಕ್ಕಳ ಚಲನವಲನಗಳನ್ನು ಪರಿಶೀಲನೆ ‌ಮಾಡಿ, ಕಾಲೇಜಿಗೆ ಎಷ್ಟು ಗಂಟೆಗೆ ತಲುಪುತ್ತಾಳೆ, ಕಾಲೇಜಿನಿಂದ ಮನೆಗೆ ಎಷ್ಟು ಗಂಟೆಗೆ ತಲುಪುತ್ತಾಳೆ ಎಂದು ಗಮನಿಸಿ ಎಂದು ಬೆದರಿಕೆ ಹಾಕಲಾಗಿದೆ.

ಓದಿರಿ :-   ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟ ನಿಧನ

ಎಂಡಿಎಫ್ ಸಂಘಟನೆ ಅನಧಿಕೃತವಾಗಿ ‌ನಡೆಯುತ್ತಿದೆ ಎಂಬುದನ್ನು ಈ ಸಂದೇಶಗಳು ಬಯಲು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಇತ್ತೀಚೆಗೆ ಕೆಲವು ಮುಸ್ಲಿಂ ಸಂಘಟನೆ ಮತ್ತು ಮುಖಂಡರು ನನ್ನನ್ನು ಭೇಟಿ ಮಾಡಿ‌ ಮನವಿಯೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮುಸ್ಲಿಂ ಡಿಫೆನ್ಸ್ ಫೋರ್ಸ್ 24*7 ಎಂಬ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಮಾಲ್​ಗಳಲ್ಲಿ, ಶಾಲಾ ಕಾಲೇಜು ಹೊರಗಡೆ ಬುರ್ಖಾ ಹಾಕಿರುವ ಸಂದರ್ಭದಲ್ಲಿ ಬುರ್ಖಾ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ಮಾಡಬಾರದು, ಗಂಡು ಮಕ್ಕಳ ಜೊತೆಗೆ ಮಾತಾಡಬಾರದು. ಈ ರೀತಿ ಮಾಡಿದರೆ ಅವರ ಪೋಷಕರು ತಿಳಿವಳಿಕೆ ಹೇಳಬೇಕು. ಇಲ್ಲದಿದ್ದರೆ ನಾವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ರೀತಿಯಲ್ಲಿ ಮೆಸೇಜ್ ಫಾರ್ವರ್ಡ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ರೀತಿ ಸಂದೇಶ ಕಳುಹಿಸಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ‌. ನಮ್ಮ ಸಾಮಾಜಿಕ ಜಾಲತಾಣ ನಿಗಾ ವಿಭಾಗದಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್​ ತಿಳಿಸಿದ್ದಾರೆ.

advertisement

ನಿಮ್ಮ ಕಾಮೆಂಟ್ ಬರೆಯಿರಿ