2017ರ ‘ಆಜಾದಿ ಮಾರ್ಚ್’​ ಪ್ರಕರಣ: ಶಾಸಕ ಜಿಗ್ನೇಶ್ ಮೇವಾನಿ ಸೇರಿ 10 ಮಂದಿಗೆ 3 ತಿಂಗಳ ಜೈಲು ಶಿಕ್ಷೆ

ಮೆಹ್ಸಾನಾ (ಗುಜರಾತ್‌): ಅನುಮತಿ ಪಡೆಯದೇ ‘ಆಜಾದಿ ಮಾರ್ಚ್‌’ ನಡೆಸಿದ ಆರೋಪದ ಐದು ವರ್ಷ ಹಿಂದಿನ ಪ್ರಕರಣದಲ್ಲಿ ಗುಜರಾತ್‌ನ ಸ್ವತಂತ್ರ ಶಾಸಕ ಜಿಗ್ನೇಶ್‌ ಮೆವಾನಿ ಮತ್ತು ಇತರ ಒಂಬತ್ತು ಮಂದಿಗೆ ಇಲ್ಲಿನ ಹೆಚ್ಚುವರಿ ಜ್ಯೂಡಿಶಿಯಲ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಗುರುವಾರ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಲ್ಲದೆ ಎಲ್ಲ 10 ಅಪರಾಧಿಗಳಿಗೆ ತಲಾ ₹ 1,000 ದಂಡವನ್ನೂ ವಿಧಿಸಿದೆ.
ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಜೆ.ಎ. ಪರ್ಮಾರ್ ಅವರು, ಜಿಗ್ನೇಶ್‌ ಮೇವಾನಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್ ಹಾಗೂ ಮೆವಾನಿಯವರ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿದಂತೆ ಹತ್ತು ಮಂದಿಯನ್ನು ಕಾನೂನುಬಾಹಿರವಾಗಿ ಸಭೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.

2017ರ ಜುಲೈನಲ್ಲಿ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ ಅನುಮತಿಯಿಲ್ಲದೆ ‘ಆಜಾದಿ ಮೆರವಣಿಗೆ’ ಕೈಗೊಂಡಿದ್ದಕ್ಕಾಗಿ ಮೆಹ್ಸಾನಾ ‘ಎ’ ವಿಭಾಗದ ಪೊಲೀಸರು ಮೆವಾನಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಎಫ್‌ಐಆರ್‌ನಲ್ಲಿ ಹೆಸರಿದ್ದ 12 ಆರೋಪಿಗಳಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ. ರೇಷ್ಮಾ ಪಟೇಲ್ ಆಗ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ಆದರೆ, ಪಾಟಿದಾರ್ ಸಮುದಾಯ ನಡೆಸುತ್ತಿದ್ದ ಮೀಸಲಾತಿಯ ಬೆಂಬಲಿಸುತ್ತಿದ್ದರು.
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಪ್ರಕರಣವೊಂದಕ್ಕೆ ಅಸ್ಸೋಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಜಿಗ್ನೇಶ್ ಮೇವಾನಿ, ತದನಂತರ ಜಾಮೀನಿನ ಮೇಲೆ ಹೊರಬಂದಿದ್ದರು.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement