ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಮೇ 24ರ ವರೆಗೆ ಕಾಲಾವಕಾಶ ನೀಡಿದ ಕೆಎಟಿ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿಗೆ ಸಂಬಂಧಿಸಿದ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಇಪ್ಪತ್ತೆಂಟು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು (ಕೆಎಸ್‌ಎಟಿ) ಬುಧವಾರ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮೇ 24ರ ವರೆಗೆ ಕಾಲಾವಕಾಶ ನೀಡಿದೆ.
ಬೆಂಗಳೂರಿನ ಪವಿತ್ರಾ ಎಲ್‌. ಎನ್‌. ಸೇರಿದಂತೆ 28 ಅಭ್ಯರ್ಥಿಗಳು “ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿ ಆದೇಶ ನೀಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಿಕ ಸದಸ್ಯರಾದ ಟಿ ನಾರಾಯಣ ಸ್ವಾಮಿ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ವರದಿ ಪ್ರಕಾರ, ವಿಚಾರಣೆ ಆರಂಭವಾದಾಗ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಆಕ್ಷೇಪಣೆ ಸಲ್ಲಿಸಲು ಮತ್ತು ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಮರು ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸದಂತೆ ಸರ್ಕಾರವನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಬೇಕು” ಎಂದು ಕೋರಿದರು.
ಇದಕ್ಕೆ ಸರ್ಕಾರದ ಪರ ವಕೀಲರು “ಮರು ಪರೀಕ್ಷೆ ನಡೆಸಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಿದೆ. ಹೀಗಾಗಿ, ಮಧ್ಯಂತರ ಆದೇಶ ಅಗತ್ಯವಿಲ್ಲ” ಎಂದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಪೊಲೀಸ್‌ ಇಲಾಖೆಯ 545 ಸಬ್‌ ಇನ್ಸ್‌ಪೆಕ್ಟರ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರುಪರೀಕ್ಷೆಗೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಳಂಕ ರಹಿತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಮೇ 4ರಂದು ನಡೆದಿದ್ದ ವಿಚಾರಣೆಯಲ್ಲಿ ಪೀಠವು ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಒಳಾಡಳಿತ ಇಲಾಖೆಯ (ಪೊಲೀಸ್‌ ಸೇವೆಗಳು-1) ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್‌ ಮಹಾನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿತ್ತು. ಈಗ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ್ದಕ್ಕೆ ಪೀಠ ಸಮ್ಮತಿಸಿದೆ.

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement