ಮುಂದಿನ 15 ದಿನಗಳ ಕಾಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ:ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಮುಂಗಾರುಪೂರ್ವಮಳೆಯಿಂದಾಗಿ ಉಂಟಾದ ಹಾನಿ ಸಂಬಂಧ ಸೂಕ್ತ ಪರಿಹಾರ ಹಾಗೂ ನೆರವು ವಿತರಣಾ ಕಾರ್ಯ ನಡೆಸುವ ಸಲುವಾಗಿ ಮುಂದಿನ 15 ದಿನಗಳ ವರೆಗೆ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾನ್ಸೂನ್ ಪೂರ್ವ ಮಳೆಯಿಂದಾಗಿ ಮೇ 15ರಿಂದ 21ರ ವರೆಗೆ ರಾಜ್ಯದ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 430 ಜಾನುವಾರುಗಳು ಸಾವಿಗೀಡಾಗಿವೆ. 1431 ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, 4242 ಮನೆಗಳಿಗೆ ಭಾಗಶ: ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಮುಂದಿನ 15 ದಿನಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಅಕಾಲಿಕವಾಗಿ ಮೇ ಆರಂಭದಲ್ಲೇ ಸುರಿದ ಮಳೆಯಿಂದಾಗಿ ಕೃಷಿಕರೂ ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ 7010 ಹೆಕ್ಟೇರ್ ಕೃಷಿ ಬೆಳೆಗೆ ಹಾನಿಯಾಗಿದೆ. 5736 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ಪರಿಹಾರ ನೀಡಲು 728 ಕೋಟಿ ರೂ.ಗಳು ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿದ್ದು, ಅದನ್ನು ಅವರು ಬಳಸಿಕೊಳ್ಳಲು ಸೂಚಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾನಿಯಾದ ಸ್ಥಳ‌ ಪರಿಶೀಲನೆ ನಡೆಸಬೇಕು. ಸ್ಥಳ ಭೇಟಿ ಕುರಿತು ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement