ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ 24 ಕೊನೆಯ ದಿನವಾಗಿದ್ದರೂ, ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇದುವರೆಗೆ ಪ್ರಕಟಿಸಿಲ್ಲ.
ಮೇ 17ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈತನಕ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆ ದಿನವಾಗಿರುವುದರಿಂದ ನಾಳೆ, ಸೋಮವಾರ ಸಂಜೆ ವೇಳೆಗೆಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಬಹುದು ಎಂದು ಹೇಳಲಾಗಿದೆ.

ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹೈಕಮಾಂಡ್ ಮೇಲ್ಮನೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಬೇಕಾಗಿದೆ. ಹೀಗಾಗಿ ದೆಹಲಿಯ ಹೈಕಮಾಂಡ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ಜೆಡಿಎಸ್‍ನಲ್ಲಿ ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೀಡಲಾಗಿದೆ. ನಾಳೆ ಮೇಲ್ಮನೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸ್ಪರ್ಧಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಅಂಗಳಕ್ಕೆ ರವಾನಿಸಲಾಗಿದ್ದು, ಆದರೆ ಈವರೆಗೆ ಬಿಜೆಪಿ ಹೈಕಮಾಂಡ್‌ ಇದಕ್ಕೆ ಅಂತಿಮ ಮುದ್ರೆ ಒಪ್ಪಿಲ್ಲ. ಹೀಗಾಗಿ ರಾಜ್ಯ ಬಿಜೆಪಿ ಕಳಹಿಸಿದ ಪಟ್ಟಿಯಿಂದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೋ ಅಥವಾ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ. ಕಾಂಗ್ರೆಸ್‌ ಪರಿಸ್ಥಿತಿಯು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲ ಪಕ್ಷಗಳು ನಾಳೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೆಶ್‍ಗೌಡ, ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ, ಲೇಹರ್‌ ಸಿಂಗ್‌ ಜೂ.14ರಂದು ನಿವೃತ್ತಿಯಾಗುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement