ಕಡವೆ ಬೇಟೆ : ಅರಣ್ಯಾಧಿಕಾರಿ ಸಿಬ್ಬಂದಿ ದಾಳಿ; ಒಬ್ಬನ ಬಂಧನ, ಐವರು ಪರಾರಿ

ಕಾರವಾರ : ಅಡಿಕೆ ತೋಟದಲ್ಲಿ ಕಡವೆಯನ್ನು ಬೇಟೆಯಾಡಿ, ಅದನ್ನು ತಂಡರಿಸಿ ಮಾಂಶ ಹಾಗೂ ಚರ್ಮ ಬೇರ್ಪಡಿಸಿ ಚೀಲಗಳಲ್ಲಿ ತುಂಬುತ್ತಿದ್ದ ತಂಡದ ಮೇಲೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಲ್ಲೇಶ್ವರ ಗ್ರಾಮದಲ್ಲಿ ಅಕ್ಟೋಬರ್ 16ರ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಐವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅಂಕೋಲಾ ತಾಲೂಕಿನ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಎಂಬವರ ಅಡಿಕೆ ತೋಟದಲ್ಲಿ ಕಡವೆ ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ ನಂತರ ರಾಮನಗುಳಿ ವಲಯದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಕಡವೆಯನ್ನು ಕೊಂದು, ಚರ್ಮ ಬೇರ್ಪಡಿಸಿ ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದುದು ಕಂಡುಬಂದಿದೆ.

ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಬಂಧಿತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗಣೇಶ ರಾಮು ರಾಠೋಡ, ಲಕ್ಷ್ಮಣ ಬಾಬು ಸಿದ್ದಿ, ಲೋಕೇಶ ನಾರಾಯಣ ಸಿದ್ದಿ, ಶಿವರಾಜ ಲಕ್ಷ್ಮಣ ಸಿದ್ದಿ ಹಾಗೂ ರಾಜು ಕೃಷ್ಣಾ ಸಿದ್ದಿ ಪರಾರಿಯಾಗಿದ್ದು, ಶೋಧ ಕಾರಯಾಚರಣೆ ನಡೆದಿದೆ.
ದಾಳಿಯ ವೇಳೆ ಕಡವೆಯ ಮಾಂಸ, ತಲೆ, ಕಾಲು, ಚರ್ಮ ಸೇರಿದಂತೆ ಅಂಗಾಂಗಗಳಿದ್ದ ಮೂರು ಚೀಲಗಳು, ಮೂರು ಕತ್ತಿ, ಒಂದು ಚಾಕು ಹಾಗೂ ಹೆಡ್‌ಟಾರ್ಚ್‌ ವಶಪಡಿಸಿಕೊಳ್ಳಲಾಗಿದ್ದು, ಅಂದಾಜು ₹1.5 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಬಾಲಕನಿಗೆ ಕಚ್ಚಿದ ಹಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement