ಪಠ್ಯಪುಸ್ತಕದಿಂದ ಈಗ ದೇವನೂರು ಮಹಾದೇವ ಬರಹ ಕೈಬಿಡಲು ಆಗುವುದಿಲ್ಲ: ಶಿಕ್ಷಣ ಸಚಿವ ನಾಗೇಶ

posted in: ರಾಜ್ಯ | 0

ಮೈಸೂರು: ಕರ್ನಾಟಕದ ವಿದ್ಯಾರ್ಥಿಗಳಿಗೆ ವಿತರಿಸುವ ಪಠ್ಯಪುಸ್ತಕಗಳ ಮುದ್ರಣ ಈಗಾಗಲೇ ಪೂರ್ಣಗೊಂಡಿದೆ. ಹೀಗಾಗಿ ಈ ಹಂತದಲ್ಲಿ ದೇವನೂರು ಮಹಾದೇವ ಅವರ ಬರಹವನ್ನು ಕೈಬಿಡಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ಪಾಠ ತೆಗೆಯುವಂತೆ ಸಾಹಿತಿ ದೇವನೂರು ಹೇಳಿಕೆ ನೀಡಿದ್ದಾರೆ. ಅವರು ಮೊದಲೇ ಹೀಗೆ ಹೇಳಿದ್ದರೆ ಈ ಕುರಿತು ಚರ್ಚಿಸಬಹುದಿತ್ತು. ಆದರೆ ಈಗಾಗಲೇ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣವಾಗಿದೆ. ಈ ಹಂತದಲ್ಲಿ ಪಠ್ಯದಿಂದ ಅವರ ಬರಹವನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಈ ಅಂಶವನ್ನು ದೇವನೂರು ಮಹದೇವ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

advertisement

ದೇವನೂರು ಮಹದೇವ ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮಗೆ ಇಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ. ಹಿಂದಿನಿಂದಲೂ ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದ ಮೇಲೆ ರಾಷ್ಟ್ರೀಯತೆಯನ್ನು ಪಠ್ಯದಲ್ಲಿ ಸೇರಿಸಿದ್ದೇವೆ. ಈ ಹಿಂದೆ ಎಲ್ಲವೂ ಅಮೆರಿಕ ಹೇಳಿದಂತೆ ನಡೆಯುತ್ತಿತ್ತು. ವಾಜಪೇಯಿ ಪ್ರಧಾನಿಯಾದ ಮೇಲೆ ಅದು ಬದಲಾಯಿತು ಎಂದು ಹೇಳಿದರು.
ಕಾಂಗ್ರೆಸ್ಸಿನವರಂತೆ ನಾವು ಕಂಡಕಂಡವರ ಹಿತಕ್ಕಾಗಿ ರಾಜಕಾರಣ ಮಾಡಿಲ್ಲ. ನಾವು ನಮ್ಮ ದೇಶದ ಜನರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡಿದ್ದೇವೆ. ಈಗ ಎಲ್ಲ ವಾದ ಮುಗಿದ ಬಳಿಕ ಈಗ ಚಾತುರ್ವರ್ಣ್ಯ ಮುನ್ನೆಲೆಗೆ ಬಂದಿದೆ ಎಂದು ಟೀಕಿಸಿದರು.

ಓದಿರಿ :-   ಹೈಕೋರ್ಟ್‌ ಮಹತ್ವದ ತೀರ್ಪು...: ಕರ್ನಾಟಕದ ಎಸಿಬಿಯನ್ನೇ ರದ್ದು ಪಡಿಸಿದ ಹೈಕೋರ್ಟ್, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ

ತಮ್ಮ ಬರಹವನ್ನು ಪಠ್ಯವಾಗಿ ಬಳಸಬಾರದು ಎಂದು ದೇವನೂರು ಮಹದೇವ ಪತ್ರಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದೆ. ಆದರೆ ನನಗೆ ಅಂಥ ಯಾವುದೇ ಪತ್ರ ಬಂದಿಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದ ಅವರು, ಎಲ್ಲ ಬಗೆಯ ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ‌ ಮಾಡಿದ್ದೇವೆ. ನಾವು ಎಲ್ಲವನ್ನೂ ಒಪ್ಪಿಕೊಂಡು ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್​ ನಾಯಕರು ವಿಚಾರಗಳ ಚರ್ಚೆಯಲ್ಲಿ ಸೋತು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಶಿಕ್ಷಣವಷ್ಟೇ ಅಲ್ಲ, ಇತರ ಹಲವಾರು ಕ್ಷೇತ್ರಗಳಲ್ಲಿಯೂ ಬದಲಾವಣೆಗಳನ್ನು ತಂದಿದ್ದೇವೆ. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ, ಅದರ ಬಗ್ಗೆಯೂ ಮಾತನಾಡಿ ಎಂದ ಅವರು, ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದರೆ, ಒಂದೇ ಪಂಥದ ಬರಹಗಳನ್ನು ಸೇರಿಸಿದರೆ ಅದು ತಪ್ಪಲ್ಲ, ಆದರೆ ಈಗ ಮಾತ್ರ ಅವರಿಗೆ ಪಂಥಗಳು ಕಾಣುತ್ತಿವೆ ಎಂದು ವ್ಯಂಗ್ಯವಾಡಿದರು.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ನಿಮ್ಮ ಕಾಮೆಂಟ್ ಬರೆಯಿರಿ

advertisement