ಧಾರವಾಡ: ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಅಪ್ರಾಪ್ತ ವಯಸ್ಸಿನ ಮಗಳು ನಂತರ ಆತನ ಜತೆ ಪರಾರಿಯಾದ ಆಘಾತಕಾರಿ ಘಟನೆ ಧಾರವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಚಾಕುವಿನಿಂದ ಇರಿತಕ್ಕೊಳಗಾದ ಮಹಿಳೆಯನ್ನು ಜೀಜಾಬಾಯಿ ಎಂದು ಗುರುತಿಸಲಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಆರೋಪಿ ಪರಶುರಾಮ ಹಾಗೂ ಅವರ ಮಗಳು ಕೆಲ ದಿನಗಳ ಹಿಂದೆ ಓಡಿಹೋಗಿದ್ದರು. ತನ್ನ ಮಗಳು ಇನ್ನೂ ಅಪ್ರಾಪ್ತೆಯಾಗಿದ್ದು, ಅವಳನ್ನು ತನಗೆ ಒಪ್ಪಿಸಬೇಕೆಂದು ಜೀಜಾಬಾಯಿ ದೂರು ದಾಖಲಿಸಿದ್ದರು. ಈ ಬಳಿಕ ಪತ್ತೆ ಮಾಡಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಅಪ್ರಾಪ್ತ ಮಗಳನ್ನು ಬಾಲಭವನದಲ್ಲಿ ಇರಿಸಲಾಗಿತ್ತು. ಅಪ್ರಾಪ್ತೆಯಾಗಿರುವ ಕಾರಣಕ್ಕೆ ಪ್ರಿಯಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ. ತಮ್ಮ ಮೇಲೆ ದೂರು ನೀಡಿದ್ದರಿಂದ ತಾಯಿ ಮೇಲೆ ಕೋಪಗೊಂಡಿದ್ದ ಮಗಳು ಮತ್ತು ಆಕೆಯ ಪ್ರಿಯಕರ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಪರಶುರಾಮ, ಮನೆಗೆ ಬಂದು ದಾಳಿ ನಡೆಸಿದ್ದಾನೆ. ಈ ವೇಳೆ ತನ್ನ ತಾಯಿಗೆ ಚಾಕು ಇರಿದು ಮಗಳು ಆತನೊಂದಿಗೆ ಪರಾರಿಯಾಗಿದ್ದಾಳೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ