ಫ್ಯೂಚರ್‌ ಜೊತೆಗಿನ ಒಪ್ಪಂದದಲ್ಲಿ ಲೋಪ: ಅಮೆಜಾನ್‌ಗೆ ಸಿಸಿಐ ವಿಧಿಸಿದ್ದ ₹200 ಕೋಟಿ ದಂಡದ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಟಿ

ನವದೆಹಲಿ: ಫ್ಯೂಚರ್‌ ಕೂಪನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ (ಎಫ್‌ಸಿಪಿಎಲ್‌) ಶೇ. 49ರಷ್ಟು ಪಾಲು ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿ ಹಂಚಿಕೊಳ್ಳಲು ವಿಫಲವಾಗಿದ್ದ ಅಮೆಜಾನ್‌ಗೆ ₹200 ಕೋಟಿ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಎತ್ತಿಹಿಡಿದಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ವರದಿ ಪ್ರಕಾರ, ಈ ಸಂಬಂಧ ಇನ್ನೂ ಇಬ್ಬರು ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ ವೇಣುಗೋಪಾಲ್ ಮತ್ತು ಡಾ ಅಶೋಕ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ದಂಡದ ಮೊತ್ತವನ್ನು ಠೇವಣಿ ಇಟ್ಟು ಸಿಸಿಐ ಆದೇಶ ಪಾಲಿಸಲು ಅಮೆಜಾನ್‌ಗೆ 45 ದಿನಗಳ ಕಾಲಾವಕಾಶ ನೀಡಿತು.
ಒಪ್ಪಂದದ ಭಾಗವಾಗಿ, ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ಷೇರುದಾರರ ಒಪ್ಪಂದವನ್ನು ತಿಳಿಸುವ, ಪ್ರಕಟಿಸುವ ವಿಷಯದಲ್ಲಿ ಅಮೆಜಾನ್‌ ವಿಫಲವಾಗಿರುವುದಕ್ಕೆ ₹ 200 ಕೋಟಿ ದಂಡ ವಿಧಿಸಲಾಗಿತ್ತು. ಹಾಗೆ ಮಾಹಿತಿ ಒದಗಿಸುವುದು ಸ್ಪರ್ಧಾ ಕಾಯಿದೆ 2002ರ ಸೆಕ್ಷನ್‌ 6 (2)ರ ಪ್ರಕಾರ ಅಮೆಜಾನ್‌ನ ಜವಾಬ್ದಾರಿಯಾಗಿತ್ತು.
ಕಾಯಿದೆಯಲ್ಲಿ ಹೇಳಲಾಗಿರುವಂತೆ ಫಾರ್ಮ್‌ ಎರಡರಲ್ಲಿ 60 ದಿನಗಳ ಒಳಗಾಗಿ ಉದ್ದೇಶಿತ ಒಪ್ಪಂದದ ಕುರಿತು ತನಗೆ ಅಮೆಜಾನ್‌ ಮಾಹಿತಿ ನೀಡುವವರೆಗೆ ಒಪ್ಪಂದವನ್ನು ಕೂಡ ಸಿಸಿಐ ಅಮಾನತಿನಲ್ಲಿಟ್ಟಿತ್ತು.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement