ಮೇಲುಕೋಟೆಯ ಬಾಹುಬಲಿ ರಾಮಸ್ವಾಮಿ ಅಯ್ಯಂಗಾರ್​​​​​​​ ನಿಧನ

ಮಂಡ್ಯ: ಮೇಲುಕೋಟೆ ಬಾಹುಬಲಿ ಎಂದೇ ಹೆಸರಾಗಿದ್ದ ರಾಮಸ್ವಾಮಿ ಅಯ್ಯಂಗಾರ್ ಇಂದು, ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ದೇವಾಲಯವು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದು. ಕ್ರಿ.ಶ 12ನೇ ಶತಮಾನದಲ್ಲಿ ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರು ಇಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದರು ಎಂದು ಹೇಳಲಾಗಿದೆ. ಆದ್ದರಿಂದ ಈ ಸ್ಥಳ ವೈಷ್ಣವ ಪಂಥದ ಪ್ರಮುಖ ಕೇಂದ್ರವಾಗಿದೆ. ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹಸ್ವಾಮಿ ದೇವಾಲಯಗಳಿವೆ. ಯೋಗಾನರಸಿಂಹಸ್ವಾಮಿ ದೇವಾಲಯ ಬೆಟ್ಟದ ಮೇಲಿದ್ದರೆ, ಚೆಲುವನಾರಾಯಣ/ ಚೆಲುವರಾಯ ಸ್ವಾಮಿ ದೇವಾಲಯ ಕೆಳಗಿದೆ.

ಕಳೆದ 40 ವರ್ಷಗಳಿಂದಲೂ ರಾಮಸ್ವಾಮಿ ಅಯ್ಯಂಗಾರ್ ಅವರು ಮೇಲುಕೋಟೆಯ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಪ್ರತಿದಿನ ಬೆಟ್ಟದ ಕೆಳಗಿರುವ ಕಲ್ಯಾಣಿಯಿಂದ ದೊಡ್ಡ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು 500 ಮೆಟ್ಟಿಲುಗಳನ್ನು ಏರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವರ ಅಭಿಷೇಕ, ಪ್ರಸಾದ ತಯಾರಿಕೆಗೆ ಬೇಕಾಗಿದ್ದ ನೀರನ್ನು ಬೆಟ್ಟದ ಕೆಳಗಿನ ಕಲ್ಯಾಣಿಯಿಂದ ಹೊತ್ತೊಯ್ಯುತ್ತಿದ್ದರು. ದಿನಕ್ಕೆ 3-4 ಬಾರಿ ಹೀಗೆ ಹತ್ತಿ ಇಳಿಯುತ್ತಿದ್ದರೂ ಅವರಿಗೆ ಸ್ವಲ್ಪವೂ ದಣಿವಾಗುತ್ತಿರಲಿಲ್ಲವಂತೆ.
ಜನರು 500 ಮೆಟ್ಟಿಲುಗಳನ್ನು ಹತ್ತಲು ಎರಡೂ ಬದಿಗಳಲ್ಲಿ ಅಲವಡಿಸಲಾಗಿರುವ ಕಬ್ಬಿಣದ ಕಂಬಿಗಳ ಸಹಾಯ ಪಡೆದರೆ, ರಾಮಸ್ವಾಮಿ ಅವರು ಮಾತ್ರ ಯಾವುದರ ಸಹಾಯವನ್ನೂ ಪಡೆಯದೆ ನೀರು ತುಂಬಿದ ಬೃಹತ್‌ ಪಾತ್ರೆ ಹೊತ್ತು ಆರಾಮವಾಗಿ ಬೆಟ್ಟ ಹತ್ತುತ್ತಿದ್ದರು. ಅವರ ಉತ್ಸಾಹ, ಶಕ್ತಿ ನೋಡಿ ಎಲ್ಲರೂ ಅವರನ್ನು ಮೇಲುಕೋಟೆಯ ಬಾಹುಬಲಿ ಎಂದು ಕರೆಯಲಾಗುತ್ತಿತ್ತು. ತನ್ನ ಈ ಶಕ್ತಿಗೆ ಯೋಗನರಸಿಂಹ ಸ್ವಾಮಿಯ ಆಶೀರ್ವಾದವೇ ಕಾರಣ ಎಂದು ರಾಮಸ್ವಾಮಿ ಅಯ್ಯಂಗಾರ್​​​​ ಹೇಳುತ್ತಿದ್ದರು ಎಂದು ಹಲವರು ನೆನಪಿಸಿಕೊಳ್ಳುತ್ತಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement